ಅಮೆರಿಕ | ವೈವಿಧ್ಯತೆ ನೀತಿ ಕೈಬಿಡಲು ಟ್ರಂಪ್‌ ಸೂಚಿಸಿದ ಬೆನ್ನಲ್ಲೇ ನಾಸಾದ ಭಾರತೀಯ ಮೂಲದ ಡಿಇಐ ಮುಖ್ಯಸ್ಥೆ ನೀಲಾ ರಾಜೇಂದ್ರ ವಜಾ

Update: 2025-04-12 21:03 IST
Neela Rajendra.

ನೀಲಾ ರಾಜೇಂದ್ರನ್ | Credit: X/@tammytabby

  • whatsapp icon

ವಾಶಿಂಗ್ಟನ್: ತಮ್ಮ ವೈವಿಧ್ಯತೆ ವಿರೋಧಿ ನೀತಿಯನ್ವಯ ನಾಸಾದ ಜೆಟ್ ಉಡ್ಡಯನ ಪ್ರಯೋಗಾಲಯದಲ್ಲಿ ಮುಖ್ಯ ಡಿಇಐ ಅಧಿಕಾರಿಯಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರನ್ ಅವರನ್ನು ಕಳೆದ ಕೆಲವು ತಿಂಗಳ ಕಣ್ಣಾಮುಚ್ಚಾಲೆಯಾಟದ ನಂತರ, ಡೊನಾಲ್ಡ್ ಟ್ರಂಪ್ ಸರಕಾರ ವಜಾಗೊಳಿಸಿದೆ.

ಈ ಕುರಿತು ಗುರುವಾರದಂದು ಎಲ್ಲ ಸಿಬ್ಬಂದಿಗಳಿಗೆ ಇಮೇಲ್ ರವಾನಿಸಿರುವ ಪ್ರಯೋಗಾಲಯದ ನಿರ್ದೇಶಕಿ ಲೌರಿ ಲೆಶಿನ್, “ನೀಲಾ ರಾಜೇಂದ್ರನ್ ಇನ್ನು ಮುಂದೆ ಜೆಟ್ ಉಡ್ಡಯನ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ನಮ್ಮ ಸಂಸ್ಥೆಯಲ್ಲಿನ ಅವರ ಸೇವೆಗೆ  ನಾವುಕೃತಜ್ಞರಾಗಿದ್ದೇವೆ. ನಾವು ಆಕೆಗೆ ಶುಭಾಶಯ ಕೋರುತ್ತೇವೆ” ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ವೈವಿಧ್ಯತೆ, ಸಮಾನತೆ ಹಾಗೂ ಒಳಗೊಳ್ಳುವಿಕೆ ಉಪಕ್ರಮಗಳ ವಿರೋಧಿ ನೀತಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

2024ರಲ್ಲಿ ಬಜೆಟ್ ಸಮಸ್ಯೆ ಹಾಗೂ ವೈವಿಧ್ಯಮಯ ಕಚೇರಿಗೆ ಅಂತ್ಯಹಾಡುವ ನೀತಿಯನ್ನು ಉಲ್ಲೇಖಿಸಿ, ನಾಸಾ ಪ್ರಯೋಗಾಲಯದ ಸುಮಾರು 900 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ನೀಲಾ ರಾಜೇಂದ್ರನ್ ಅವರ ವಜಾ ಆದೇಶವನ್ನು ಗೌಪ್ಯವಾಗಿಡಲಾಗಿತ್ತು. ಹೀಗಾಗಿ, ಅವರ ವಜಾ ಆದೇಶವು ಮಹತ್ವ ಪಡೆದುಕೊಂಡಿದೆ.

ವರದಿಯ ಪ್ರಕಾರ, ಮಾರ್ಚ್ ಆರಂಭದಲ್ಲಿ ನೀಲಾ ರಾಜೇಂದ್ರನ್ ಅವರು ನಾಸಾ ಪ್ರಯೋಗಾಲಯದ ‘ಕಪ್ಪು ಉತ್ಕೃಷ್ಟತೆ ವ್ಯೂಹಾತ್ಮಕʼ ತಂಡದ ಉಸ್ತುವಾರಿಯಾಗಿ ಉದ್ಯೋಗಿಗಳ ಯಶಸ್ಸಿನ ಮುಖ್ಯಸ್ಥೆಯಾಗಿ ತಮ್ಮ ಕರ್ತವ್ಯಗಳನ್ನು ಮುಂದುವರಿಸುತ್ತಿದ್ದರೂ, ನೀಲಾ ರಾಜೇಂದ್ರನ್ ಅವರ ವ್ಯಕ್ತಿಗತ ವಿವರಗಳೊಂದಿಗಿರುವ ಎಲ್ಲ ಡಿಇಐ ಉಲ್ಲೇಖಗಳನ್ನು ತೆಗೆದು ಹಾಕಲಾಗಿತ್ತು ಎನ್ನಲಾಗಿದೆ.

ಆದರೆ, ಡಿಇಐ ಸೇವೆಯ ವಜಾದಿಂದ ನೀಲಾ ರಾಜೇಂದ್ರನ್ ಅವರನ್ನು ಟ್ರಂಪ್ ಸರಕಾರ ರಕ್ಷಿಸುತ್ತಿದೆ ಎಂಬ ಅಸಮಾಧಾನ ತೀವ್ರಗೊಂಡಿದ್ದರಿಂದಾಗಿ, ಈ ವಾರದ ಆರಂಭದಲ್ಲಿ ಅವರನ್ನು ನಾಸಾ ಸೇವೆಯಿಂದ ವಜಾಗೊಳಿಸಿದೆ.

ಮುಂದೆ ನೀಲಾ ರಾಜೇಂದ್ರನ್ ಅವರು ಮುನ್ನಡೆಸಲಿರುವ ಉತ್ಕೃಷ್ಟತೆಯ ತಂಡ ಹಾಗೂ ಉದ್ಯೋಗಿಗಳ ಯಶಸ್ಸಿನ ನೂತನ ಡಿಇಐ-ಲೈಟ್ ಕಚೇರಿಯನ್ನು ಮಾನವ ಸಂಪನ್ಮೂಲಗಳ ವಿಭಾಗದಡಿ ವರ್ಗಾಯಿಸಲಾಗಿದೆ ಎಂದು ಎಲ್ಲ ಸಿಬ್ಬಂದಿಗಳಿಗೆ ರವಾನಿಸಿರುವ ಇಮೇಲ್ ನಲ್ಲಿ ನಾಸಾ ಪ್ರಯೋಗಾಲಯದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಸೋಮವಾರ ಪದಗ್ರಹ ಮಾಡಿದಾಗಿನಿಂದ, ಡಿಇಐ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ಅಮೆರಿಕ ಅಧ್ಯ ಕ್ಷ ಡೊನಾಲ್ಡ್ ಟ್ರಂಪ್ ಸರಣಿ ಕಾರ್ಯಾದೇಶಗಳನ್ನು ಬಿಡುಗಡೆ ಮಾಡಿದ್ದಾರೆ.

ಡಿಇಐ ಕಾರ್ಯಕ್ರಮಗಳು ಮಹಿಳೆಯರು, ಜನಾಂಗೀಯ ಅಲ್ಪಸಂಖ್ಯಾತರು, ಸಲಿಂಗ ವ್ಯಕ್ತಿಗಳು ಹಾಗೂ ಇನ್ನಿತರ ಸಾಂಪ್ರದಾಯಿಕವಾಗಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಗುಂಪುಗಳಿಗೆ ಅವಕಾಶವನ್ನು ಒದಗಿಸುವ ಆಶಯ ಹೊಂದಿವೆ. ಸಾಮಾನ್ಯವಾಗಿ ಡೆಮಾಕ್ರಟ್ ಗಳ ಬೆಂಬಲ ಪಡೆದಿರುವ ಈ ಕಾರ್ಯಕ್ರಮಗಳು ದೀರ್ಘಕಾಲೀನ ಅಸಮಾನತೆ ಹಾಗೂ ರಚನಾತ್ಮಕ ಜನಾಂಗೀಯವಾದದ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ನಾಗರಿಕ ಹಕ್ಕುಗಳ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

ಆದರೆ, ಡಿಇಐ ಕಾರ್ಯಕ್ರಮಗಳು ಇನ್ನಿತರ ಅಮೆರಿಕನ್ನರ ವಿರುದ್ಧ ಅನ್ಯಾಯಯುತ ತಾರತಮ್ಯವನ್ನು ಒಳಗೊಂಡಿದ್ದು, ಉದ್ಯೋಗ ನೇಮಕಾತಿ ಅಥವಾ ಬಡ್ತಿಯ ವೇಳೆ ಅಭ್ಯರ್ಥಿಯ ಅರ್ಹತೆಯ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಟ್ರಂಪ್ ಹಾಗೂ ಅವರ ಮಿತ್ರರು ಆರೋಪಿಸುತ್ತಿದ್ದಾರೆ.

ಈ ಆದೇಶಗಳ ಬೆನ್ನಿಗೇ, ವೈವಿಧ್ಯತೆ ಮತ್ತು ಸಮಾನ ಅವಕಾಶದ ಕಚೇರಿಯೊಳಗಿರುವ ಮುಖ್ಯ ವಿಜ್ಞಾನಿಯ ಕಚೇರಿ, ವಿಜ್ಞಾನ, ನೀತಿ ಹಾಗೂ ವ್ಯೂಹಾತ್ಮಕ ಕಚೇರಿಯೊಳಗಿನ ವೈವಿಧ್ಯತೆ, ಸಮಾನತೆ ಹಾಗೂ ಒಳಗೊಳ್ಳುವಿಕೆ ಶಾಖೆಯನ್ನು ಮುಚ್ಚಲಾಗುತ್ತದೆ ಎಂದು ಮಾರ್ಚ್ ತಿಂಗಳಲ್ಲಿ ನಾಸಾದ ಕಾರ್ಯಕಾರಿ ಆಡಳಿತಾಧಿಕಾರಿ ಜಾನೆಟ್ ಪೆಟ್ರೊ ಅವರು ತಮ್ಮ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News