ಚತ್ತೀಸ್ ಗಢ: ದಲಿತ ಯುವಕನ ವಿವಸ್ತ್ರಗೊಳಿಸಿ ಹಲ್ಲೆ; ಏಳು ಮಂದಿಯ ಬಂಧನ

Update: 2025-04-12 21:56 IST
ಚತ್ತೀಸ್ ಗಢ: ದಲಿತ ಯುವಕನ ವಿವಸ್ತ್ರಗೊಳಿಸಿ ಹಲ್ಲೆ; ಏಳು ಮಂದಿಯ ಬಂಧನ
  • whatsapp icon

ರಾಯಪುರ: ಚತ್ತೀಸ್ ಗಢದ ಸಕ್ತಿ ಜಿಲ್ಲೆಯಲ್ಲಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿದ ಹಾಗೂ ಹಲ್ಲೆ ನಡೆಸಿದ ಆರೋಪದಲ್ಲಿ ಶುಕ್ರವಾರ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ಹಿಂದುಳಿದ ವರ್ಗದ 16 ವರ್ಷದ ಬಾಲಕಿಯನ್ನು ಪ್ರೀತಿಸುತ್ತಿದ್ದ ಆರೋಪದಲ್ಲಿ 21 ವರ್ಷದ ಯುವಕನಿಗೆ ಗುರುವಾರ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶುಕ್ರವಾರ ಪ್ರಸಾರವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಮುಖ್ಯಸ್ಥ ನೀಡಿದ ದೂರಿನ ಆಧಾರದಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಸಕ್ತಿ ಪೊಲೀಸ್ ಅಧೀಕ್ಷಕ ಅಂಕಿತ್ ಶರ್ಮಾ ತಿಳಿಸಿದ್ದಾರೆ.

ಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳ ಅಡಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಥಳಿತಕ್ಕೊಳಗಾದ ಯುವಕನಿಗೆ ಎಡ ಕಣ್ಣು ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಆತನಿಗೆ ರಾಯಗಢ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಾಲಕಿಯ ಮನೆಗೆ ಭೇಟಿ ನೀಡುವ ಸಂದರ್ಭ ಆಕೆಯ ಕುಟುಂಬ ಆತನನ್ನು ಸೆರೆ ಹಿಡಿಯಿತು ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ. ಆತನನ್ನು ರಾತ್ರಿಯಿಡೀ ವಶದಲ್ಲಿ ಇರಿಸಿತು ಹಾಗೂ ನೀರಿನ ಪೈಪ್, ದೊಣ್ಣೆ , ಚಪ್ಪಲಿ ಹಾಗೂ ಸೂಜಿಯಿಂದ ಹಲ್ಲೆ ನಡೆಸಿತು ಎಂದು ಆತನ ಸಹೋದರ ತಿಳಿಸಿದ್ದಾರೆ.

‘‘ನಾವು ಸತ್ನಾಮಿ ಸಮುದಾಯ (ಚತ್ತೀಸ್ ಗಢ ಪರಿಶಿಷ್ಟ ಜಾತಿ)ಕ್ಕೆ ಸೇರಿದವರು. ಅವರು ಇತರ ಹಿಂದುಳಿದ ವರ್ಗವಾದ ಚಂದ್ರಾಸ್ ಸಮುದಾಯಕ್ಕೆ ಸೇರಿದವರು. ಆದುದರಿಂದ ಅವರ ಪ್ರೀತಿಗೆ ಆತನ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕೆ ಅವರು ನನ್ನ ಸಹೋದರನಿಗೆ ಜಾತಿ ನಿಂದನೆ ಮಾಡಿದ್ದಾರೆ’’ ಎಂದು ಯುವಕನ ಸಹೋದರ ತಿಳಿಸಿದ್ದಾನೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News