ನ್ಯಾಶನಲ್ ಹೆರಾಲ್ಡ್ ಪ್ರಕರಣ | ಸೋನಿಯಾ, ರಾಹುಲ್ ಗೆ ನಂಟಿರುವ ಆಸ್ತಿಗಳ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ ಈಡಿ

Update: 2025-04-12 20:47 IST
Sonia Gandhi, Rahul Gandhi

ಸೋನಿಯಾಗಾಂಧಿ , ರಾಹುಲ್ ಗಾಂಧಿ | PTI

  • whatsapp icon

ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆ ನಂಟು ಹೊಂದಿರುವ ಕೆಲವು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಸೋನಿಯಾ ಹಾಗೂ ರಾಹುಲ್ ಒಡೆತನದ ಯಂಗ್ ಇಂಡಿಯನ್ ಲಿಮಿಟೆಡ್ ಕಂಪೆನಿಯು ಖರೀದಿಸಿರುವ ಆಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನ ಆಸ್ತಿಗಳಿರುವ ದಿಲ್ಲಿ, ಮುಂಬೈ ಹಾಗೂ ಲಕ್ನೋ ನಗರಗಳ ಆಸ್ತಿ ನೋಂದಣಿ ಅಧಿಕಾರಿಗಳಿಗೆ ಕೇಂದ್ರ ಜಾರಿ ನಿರ್ದೇಶನಾಲಯವು ಎಪ್ರಿಲ್ 11ರಂದು ನೋಟಿಸ್ ಜಾರಿಗೊಳಿಸಿತ್ತು.

ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯ ಪ್ರಕಾಶಕ ಸಂಸ್ಥೆ ಎಜೆಎಲ್ನ ಖರೀದಿಯಲ್ಲಿ ನಡೆದಿದೆಯೆನ್ನಲಾದ ಆರ್ಥಿಕ ಅವ್ಯವಹಾರಗಳು ಹಾಗೂ ನಿಧಿಗಳ ದುರ್ಬಳಕೆ ಕುರಿತ ಆರೋಪಗಳ ಬಗ್ಗೆ ಈಡಿ ತನಿಖೆ ನಡೆಸುತ್ತಿದೆ. 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳ ಮೇಲೆ ನಿಯಂತ್ರಣ ಸ್ಥಾಪಿಸುವ ದುರುದ್ದೇಶದಿಂದ ಯಂಗ್ ಇಂಡಿಯಾ ಸಂಸ್ಥೆಯು ಎಜೆಎಲ್ ನ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿತ್ತು ಎಂದು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ನೀಡಿದ್ದ ಪ್ರಾಥಮಿಕ ದೂರಿನಲ್ಲಿ ಆಪಾದಿಸಿದ್ದರು.

ಎಜೆಎಲ್ನ ಆಸ್ತಿಗಳಿಗೆ ಸಂಬಂಧಿಸಿ ನಡೆದ ಅವ್ಯವಹಾರಗಳಲ್ಲಿ ಗಳಿಸಿದ 988 ಕೋಟಿ ರೂ. ಕಪ್ಪು ಹಣವನ್ನು ಬಿಳುಪುಗೊಳಿಸಿರುವ ಕುರಿತಾಗಿ ತನಿಖೆಗಳನ್ನು ನಡೆಸಲಾಗುತ್ತದೆ.

2023ರ ನವೆಂಬರ್ನಲ್ಲಿ ಜಾರಿ ನಿರ್ದೇಶನಾಲಯವು ದಿಲ್ಲಿ,ಮುಂಬೈ ಹಾಗೂ ಲಕ್ನೋ ನಗರಗಳಲ್ಲಿರುವ 661 ಕೋಟಿ ರೂ. ಮೌಲ್ಯದ ಎಜೆಎಲ್ನ ಸ್ಥಿರಾಸ್ತಿಗಳು ಹಾಗೂ ಕಂಪೆನಿಯ 90.2 ಕೋಟಿ ರೂ. ಮೌಲ್ಯದ ಶೇರುಗಳನ್ನು ಜಾರಿ ನಿರ್ದೇಶನಾಲಯವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈನಲ್ಲಿರುವ ಹೆರಾಲ್ಡ್ ಹೌಸ್ ನ ಮೂರು ಅಂತಸ್ತುಗಳಲ್ಲಿ ಪ್ರಸಕ್ತ ವಾಸ್ತವ್ಯವನ್ನು ಹೊಂದಿರುವ ಜಿಂದಾಲ್ ಸೌತ್ ವೆಸ್ಟ್ ಪ್ರಾಜೆಕ್ಟ್ಸ್ ಸಂಸ್ಥೆಗೂ ನೋಟಿಸ್ ಜಾರಿಗೊಳಿಸಲಾಗಿದೆ.

ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರು 2 ಸಾವಿರ ಕೋಟಿ ರೂ. ಮೌಲ್ಯದ ಎಜೆಎಲ್ ನ ಆಸ್ತಿಗಳನ್ನು , ಯಂಗ್ ಇಂಡಿಯನ್ ಕಂಪೆನಿಯ ಮೂಲಕ ವಂಚನಾತ್ಮಕವಾಗಿ ಕೇವಲ 50 ಲಕ್ಷ ರೂ. ಕನಿಷ್ಠ ಹಣವನ್ನು ಪಾವತಿಸಿ ಸ್ವಾಧೀಪಡಿಸಿಕೊಂಡಿದ್ದರೆಂದು 2014ರಲ್ಲಿ ಸುಬ್ರಹ್ಮಣ್ಯ ಸ್ವಾಮಿ ಅವರು ದಿಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದರು.

ದಿಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗಳಲ್ಲಿ ಈ ಪ್ರಕರಣವನ್ನು ಪ್ರಶ್ನಿಸಲಾಯಿತಾದರೂ, ಉಭಯ ನ್ಯಾಯಾಲಯಗಳು ತನಿಖೆಯನ್ನು ಮುಂದುವರಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News