ಮಣಿಪುರ | ಜನಾಂಗೀಯ ವೈಷಮ್ಯ ಮರೆತು ಅಪಘಾತದಲ್ಲಿ ಗಾಯಗೊಂಡ ಮೈತೈ ಚಾಲಕನಿಗೆ ನೆರವಾದ ಕುಕಿಗಳು

ಇಂಫಾಲ : ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರದಲ್ಲಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿರುವ ಘಟನೆ ನಡೆದಿದೆ. ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಕುಕಿ ಬುಡಕಟ್ಟು ಸಮುದಾಯದ ಜನರು ಜನಾಂಗೀಯ ವೈಷಮ್ಯವನ್ನು ಮರೆತು ಅಪಘಾತದಲ್ಲಿ ಗಾಯಗೊಂಡಿದ್ದ ಮೈತೈ ಸಮುದಾಯದ ಲಾರಿ ಚಾಲಕನಿಗೆ ಸಕಾಲದಲ್ಲಿ ನೆರವಾಗುವ ಮೂಲಕ ಆತನ ಪ್ರಾಣವನ್ನು ಉಳಿಸಿದ್ದಾರೆ.
ಶುಕ್ರವಾರ ಅಪರಾಹ್ನ ಆಲೂಗಡ್ಡೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಕುಕಿ ಪ್ರಾಬಲ್ಯದ ಪ್ರದೇಶವಾಗಿರುವ ಕೀಥೇಲ್ ಮಾನ್ಬಿ ಮಿಲಿಟರಿ ಕಾಲನಿಯ ಬಳಿ ಪಲ್ಟಿಯಾಗಿತ್ತು. ಚಾಲಕ ಹೇಮಾಮ್ ಪ್ರೇಮ್ ಸಿಂಗ್(36) ಗಂಭೀರವಾಗಿ ಗಾಯಗೊಂಡಿದ್ದು,ಆತನ ಬಲಗಿವಿಯಿಂದ ರಕ್ತಸ್ರಾವವಾಗುತ್ತಿತ್ತು.
ಎರಡು ವರ್ಷಗಳ ಹಿಂದೆ ಮಣಿಪುರದಲ್ಲಿ ಜನಾಂಗಿಯ ಹಿಂಸಾಚಾರ ಆರಂಭಗೊಂಡಾಗಿನಿಂದ ಇಂಫಾಲ ಕಣಿವೆಯಲ್ಲಿ ಪ್ರಾಬಲ್ಯ ಹೊಂದಿರುವ ಮೈತೈಗಳು ಮತ್ತು ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಕುಕಿಗಳು ಸುರಕ್ಷತಾ ಕಾರಣಗಳಿಂದ ಪರಸ್ಪರರ ಪ್ರದೇಶದಲ್ಲಿ ಕಾಲಿಡುವುದಿಲ್ಲ.
ಆದರೆ ಶುಕ್ರವಾರ ಜನಾಂಗೀಯ ವೈಷಮ್ಯವನ್ನು ಮರೆತು ಗಾಯಾಳು ಚಾಲಕನ ನೆರವಿಗೆ ಧಾವಿಸಿದ ಕುಕಿಗಳು ಆಲೂಗಡ್ಡೆ ಚೀಲಗಳಡಿ ಸಿಕ್ಕಿಕೊಂಡಿದ್ದ ಆತನನ್ನು ರಕ್ಷಿಸಿದ್ದು ಮಾತ್ರವಲ್ಲ,ಗಡಿ ಭದ್ರತಾ ಪಡೆ ಮತ್ತು ರಸ್ತೆ ಗಸ್ತು ಸಿಬ್ಬಂದಿಗಳ ನೆರವಿನೊಂದಿಗೆ ಆತ ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವಂತೆ ನೋಡಿಕೊಂಡಿದ್ದಾರೆ.