ತ್ರಿಪುರ | ವಕ್ಫ್ ಕಾಯ್ದೆ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 18 ಮಂದಿ ಪೊಲೀಸರಿಗೆ ಗಾಯ: 8 ಮಂದಿ ಪ್ರತಿಭಟನಾಕಾರರ ಬಂಧನ

ಅಗರ್ತಲ: ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆಯು ಹಿಂಸೆಗೆ ತಿರುಗಿದ್ದರಿಂದ, ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸೇರಿದಂತೆ ಕನಿಷ್ಠ ಪಕ್ಷ 18 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿರುವ ಘಟನೆ ಶನಿವಾರ ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಬ್ಜಾರ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡವರ ಪೈಕಿ ಕೈಲ್ ಶಹರ್ ನ ಉಪ ಪೊಲೀಸ್ ವಿಭಾಗಾಧಿಕಾರಿ ಜಯಂತ ಕರ್ಮಾಕಾರ್ ಕೂಡಾ ಸೇರಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಎಂಟು ಮಂದಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮುಹಮ್ಮದ್ ಬದ್ರುಝ್ಝಮನ್ ನೇತೃತ್ವದಲ್ಲಿ ‘ಜಂಟಿ ಹೋರಾಟ ಸಮಿತಿ’ಯ ಬ್ಯಾನರ್ ನಡಿ ಸುಮಾರು 4,000 ಮಂದಿ ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿದರು.
“ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆಯುಂಟಾಯಿತು. ಕೂಡಲೇ ಪರಿಸ್ಥಿತಿಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಗಳ ಮೇಲೆ ಕಲ್ಲು ಹಾಗೂ ಬಾಟಲಿಗಳ ತೂರಾಟ ನಡೆಸಿದ್ದಾರೆ. ಈ ದಾಳಿಯಲ್ಲಿ ಉಪ ಪೊಲೀಸ್ ವಿಭಾಗಾಧಿಕಾರಿ ಜಯಂತ ಕರ್ಮಾಕರ್ ಸೇರಿದಂತೆ ಕನಿಷ್ಠ ಪಕ್ಷ 18 ಮಂದಿ ಪೊಲೀಸರು ಗಾಯಗೊಂಡಿದ್ದಾರೆ” ಎಂದು ಕೈಲಾಶಹರ್ ಪೊಲೀಸ್ ಠಾಣೆಯ ಉಸ್ತುವಾರಿ ಸುಕಾಂತ ಸೇನ್ ಚೌಧರಿ ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆಯೆ ಲಾಠಿ ಚಾರ್ಜ್ ನಡೆಸಿರುವ ಪೊಲೀಸರು, ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್ ಸಿಡಿಸಿದರು ಎಂದು ಅವರು ಹೇಳಿದ್ದಾರೆ.
“ಪೊಲೀಸರ ಮೇಲಿನ ದಾಳಿಯ ಸಂಬಂಧ ನಾವು ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಈ ಪ್ರಕರಣದ ಸಂಬಂಧ ಇಲ್ಲಿಯವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ” ಎಂದು ಅವರು ತಿಳಿಸಿದ್ದಾರೆ.
ನಂತರ, ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬದ್ರುಝ್ಝಮನ್, “ನಾವು ಶಾಂತಿಯುತ ಮೆರವಣಿಗೆಯನ್ನು ಆಯೋಜಿಸಿದ್ದೆವು. ಆದರೆ, ಪಟ್ಟಭದ್ರ ಹಿತಾಸಕ್ತಿಗಳ ಗುಂಪು ನಮಗೆ ಕಳಂಕ ಹಚ್ಚಲು, ನಮ್ಮ ಶಾಂತಿಯುತ ಮೆರವಣಿಗೆಯನ್ನು ಹಿಂಸಾತ್ಮಕಗೊಳಿಸಿದವು. ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಾವು ನಡೆಸುತ್ತಿರುವ ಹೋರಾಟವನ್ನು ಮುಂದುವರಿಸಲಿದ್ದೇವೆ” ಎಂದು ಸ್ಪಷ್ಟಪಡಿಸಿದರು