ಜಮ್ಮು ಮತ್ತು ಕಾಶ್ಮೀರ | ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್: ಭದೇರ್ವಾದಲ್ಲಿ ಪ್ರತಿಭಟನೆ, ಭಾಗಶಃ ಬಂದ್

ಸಾಂದರ್ಭಿಕ ಚಿತ್ರ | PC : freepik.com
ಭದೇರ್ವಾ: ಹಿಂದೂ ಸಂಘಟನೆಯೊಂದು ಮಾಡಿದ್ದ ಆಕ್ಷೇಪಾರ್ಹ ಪೋಸ್ಟ್ ಅನ್ನು ಪ್ರತಿಭಟಿಸಿ, ಶನಿವಾರ ದೋಡಾ ಜಿಲ್ಲೆಯ ಕೋಮು ಸೂಕ್ಷ್ಮ ಪ್ರದೇಶವಾದ ಭದೇರ್ವಾದಲ್ಲಿ ಪ್ರತಿಭಟನೆಗಳು ನಡೆದಿದ್ದು, ಭಾಗಶಃ ಬಂದ್ ಮಾಡಲಾಗಿದೆ. ಇದರಿಂದಾಗಿ, ಪ್ರಾಧಿಕಾರಗಳು ಮೊಬೈಲ್ ಅಂತರ್ಜಾಲ ಸೇವೆಗಳನ್ನು ಅಮಾನತುಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಆರೋಪಿ ವಿರೇಂದ್ರ ರಾಝ್ದಾನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲು ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭದೇರ್ವಾದ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಶರ್ಮ ಹೇಳಿದ್ದಾರೆ.
ಇದೇ ವೇಳೆ, ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಅವರು ಜನರಿಗೆ ಮನವಿ ಮಾಡಿದ್ದಾರೆ.
ಭದೇರ್ವಾದ ಶ್ರೀ ಸನಾತನ ಧರಂ ಸಭಾದ ಮುಖ್ಯಸ್ಥ ರಾಝ್ದಾನ್, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕೋಮು ಸೂಕ್ಷ್ಮ ತುಣಕನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕುರಿತು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳೆರಡರಿಂದಲೂ ವಿರೋಧ ವ್ಯಕ್ತವಾಗಿದೆ.
ರಾಝ್ದಾನ್ ರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಖಂಡಿಸಿ, ಶನಿವಾರ ಸ್ಥಳೀಯ ಜಾಮಿಯಾ ಮಸೀದಿಯಿಂದ ಭದೇರ್ವಾ ಪೊಲೀಸ್ ಠಾಣೆವರೆಗೂ ಮೆರವಣಿಗೆ ನಡೆಸಿದ ಭದೇರ್ವಾದ ಅಂಜುಮನ್-ಇ-ಇಸ್ಲಾಮಿಯಾ ಸಂಘಟನೆ, “ಆಕ್ಷೇಪಾರ್ಹ ಪೋಸ್ಟ್ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿರುವ ದುಷ್ಕರ್ಮಿಯನ್ನು ಬಂಧಿಸಬೇಕು” ಎಂದು ಘೋಷಣೆಗಳನ್ನು ಕೂಗಿತು.
ಕಾನೂನಿನ ಪ್ರಕಾರ, ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಭರವಸೆ ನೀಡಿದ ನಂತರ, ಪ್ರತಿಭಟನಾಕಾರರು ಸ್ಥಳದಿಂದ ಚದುರಿದರು. ಆದರೆ, ಅಂಜುಮನ್ ಸಂಘಟನೆ ನೀಡಿದ್ದ ಬಂದ್ ಕರೆಗೆ ಪ್ರತಿಯಾಗಿ, ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳು ಭಾಗಶಃ ಬಂದ್ ಆಗಿದ್ದವು.
ಈ ನಡುವೆ, ರಾಝ್ದಾನ್ ರ ಪೋಸ್ಟ್ ಅನ್ನು ‘ದುರದೃಷ್ಟಕರ’ ಎಂದು ಖಂಡಿಸಿರುವ ಪಶ್ಚಿಮ ಭದೇರ್ವಾದ ಹಿರಿಯ ಬಿಜೆಪಿ ನಾಯಕ ಹಾಗೂ ಜಿಲ್ಲಾ ಅಭಿವೃದ್ಧಿ ಮಂಡಳಿಯ ಸದಸ್ಯ ಠಾಕೂರ್ ಯುದ್ಧ್ ವೀರ್, ರಾಝ್ಧಾನ್ ತಮ್ಮ ವೈಯಕ್ತಿಕ ಸಾಮರ್ಥ್ಯದ ಆಧಾರದಲ್ಲಿ ಆಕ್ಷೇಪಾರ್ಹ ವಿಡಿಯೊವನ್ನು ಅಪ್ಲೋಡ್ ಮಾಡಿದ್ದು, ಅವರ ಪೋಸ್ಟ್ ಗೂ, ಭದೇರ್ವಾದ ಸನಾತನ್ ಧರಂ ಸಭಾಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.