ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರದ ಬೆನ್ನಲ್ಲೇ ಕ್ರೈಸ್ತರ ಭೂಮಿ ಮೇಲೆ ಆರೆಸ್ಸೆಸ್ ಕಣ್ಣು?

ಸಾಂದರ್ಭಿಕ ಚಿತ್ರ (thenewsminute.com)
ಹೊಸದಿಲ್ಲಿ : ಆರೆಸ್ಸೆಸ್ ಮುಖವಾಣಿ ʼಆರ್ಗನೈಸರ್ʼನಲ್ಲಿ ಪ್ರಕಟವಾಗಿದ್ದ ಲೇಖನವೊಂದು ಕ್ಯಾಥೊಲಿಕ್ ಚರ್ಚ್ ಗಳನ್ನು ಗುರಿ ಮಾಡಿದೆ. ಭಾರತದಲ್ಲಿ ಅತಿ ಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ಮಂಡಳಿಯ ಕೈಯಲ್ಲಲ್ಲ, ಬದಲಾಗಿ ಭಾರತದ ಕ್ಯಾಥೋಲಿಕ್ ಚರ್ಚ್ ಗಳ ಬಳಿಯಲ್ಲಿ ಎಂದು ಲೇಖನದಲ್ಲಿ ಹೇಳಲಾಗಿದೆ. ಆದರೆ ಪ್ರಕಟವಾದ ಮರುದಿನವೇ ಲೇಖನವನ್ನು ತೆಗೆದುಹಾಕಲಾಗಿದೆ.
ಆ ಬರಹದ ವಿವರಗಳನ್ನು Newindianexpres ಶನಿವಾರ ಪ್ರಕಟಿಸಿದೆ.
ಹಲವು ವರ್ಷಗಳಿಂದ ಸರಕಾರಿ ಜಮೀನಿನ ನಂತರ ಭಾರತದಲ್ಲಿ ವಕ್ಫ್ ಮಂಡಳಿಯ ಬಳಿಯೇ ಅತಿ ಹೆಚ್ಚು ಭೂಮಿ ಇದೆ ಎಂದು ಹೇಳಲಾಗಿತ್ತು. ಆದರೆ ನಿಜವಾಗಿಯೂ ಭೂ ಒಡೆತನದ ವಿಚಾರದಲ್ಲಿ ಸರಕಾರದ ನಂತರದ ಸ್ಥಾನದಲ್ಲಿರುವುದು ವಕ್ಫ್ ಮಂಡಳಿಯಲ್ಲ. ಬದಲಾಗಿ ಭಾರತದ ಕ್ಯಾಥೋಲಿಕ್ ಚರ್ಚ್ ಗಳು ಎಂದು ಆರ್ಗನೈಸರ್ ಲೇಖನದಲ್ಲಿ ಹೇಳಿದೆ. ಕ್ಯಾಥೊಲಿಕ್ ಚರ್ಚ್ ಅನ್ನು ಭಾರೀ ಪ್ರಮಾಣದ ಭೂಮಿಯನ್ನು ಹೊಂದಿರುವ ಅತಿ ದೊಡ್ಡ ಸರಕಾರೇತರ ಭೂಮಾಲಕ ಎಂದು ಹೇಳಿದೆ.
ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿ ಮಾತನಾಡಿದ ಸಚಿವ ಕಿರಣ್ ರಿಜಿಜು, ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಅತಿ ಹೆಚ್ಚು ಆಸ್ತಿ ಇರುವುದು ವಕ್ಫ್ ಮಂಡಳಿ ಕೈಯಲ್ಲಿ ಎಂದಿದ್ದರು. ಈಗ ವಕ್ಫ್ ಮೇಲೆ ಹಿಡಿತ ಸರಕಾರ ಸಾಧಿಸುವ ಯತ್ನವೆನ್ನಲಾಗುವ ತಿದ್ದುಪಡಿ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಆರ್ಗನೈಸರ್, ಮುಂದಿನ ಗುರಿ ಎಂಬಂತೆ ಕ್ಯಾಥೊಲಿಕ್ ಚರ್ಚ್ ಗಳ ಆಸ್ತಿ ಕಥೆಯನ್ನು ಮುನ್ನಲೆಗೆ ತಂದಿದೆ.
ಲೇಖನದ ಪ್ರಕಾರ, ಕ್ಯಾಥೋಲಿಕ್ ಚರ್ಚ್ ದೇಶಾದ್ಯಂತ ಸುಮಾರು 17.29 ಕೋಟಿ ಎಕರೆ ಅಂದರೆ 7 ಕೋಟಿ ಹೆಕ್ಟೇರ್ ಭೂಮಿಯನ್ನು ಹೊಂದಿದೆ. ಅದರ ಪ್ರಕಾರ, ಭಾರತದಲ್ಲಿ ಮುಸ್ಲಿಮರ ವಕ್ಫ್ ಗಿಂತ ಅತಿ ಹೆಚ್ಚು ಭೂಮಿ ಇರುವುದು ಕ್ಯಾಥೊಲಿಕ್ ಚರ್ಚ್ ಗಳ ಬಳಿಯಲ್ಲಿ.
ಕ್ಯಾಥೊಲಿಕ್ ಚರ್ಚ್ ಗಳ ಆಸ್ತಿ ಕುರಿತ ಆ ಲೇಖನದಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳು ಹೀಗಿವೆ:
ಈ ಆಸ್ತಿಗಳ ಒಟ್ಟು ಅಂದಾಜು ಮೌಲ್ಯ ಸುಮಾರು 20,000 ಕೋಟಿ ರೂ.
ಚರ್ಚ್ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗಮನಾರ್ಹ ಪಾತ್ರ ವಹಿಸಿದೆ.
2012 ರಲ್ಲಿ ಅಂದಾಜಿಸಿದಂತೆ ಕ್ಯಾಥೋಲಿಕ್ ಚರ್ಚ್ ಗಳು ದೇಶದಲ್ಲಿ 2,457 ಆಸ್ಪತ್ರೆಗಳನ್ನು ಹೊಂದಿವೆ.
240 ವೈದ್ಯಕೀಯ ಅಥವಾ ನರ್ಸಿಂಗ್ ಕಾಲೇಜುಗಳಿವೆ.
28 ಸಾಮಾನ್ಯ ಕಾಲೇಜುಗಳಿವೆ
5 ಎಂಜಿನಿಯರಿಂಗ್ ಕಾಲೇಜುಗಳಿವೆ.
3,765 ಮಾಧ್ಯಮಿಕ ಶಾಲೆಗಳನ್ನು ಕ್ಯಾಥೊಲಿಕ್ ಚರ್ಚ್ಗಳು ಹೊಂದಿವೆ.
7,319 ಪ್ರಾಥಮಿಕ ಶಾಲೆಗಳಿವೆ.
3,187 ನರ್ಸರಿ ಶಾಲೆಗಳಿವೆ.
ಕ್ಯಾಥೊಲಿಕ್ ಚರ್ಚ್ ಗಳ ಬಳಿ ಇವತ್ತು ಇರುವ ಭೂಮಿಗಳಲ್ಲಿ ಹೆಚ್ಚಿನದನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಯಿತು. 1927ರಲ್ಲಿ ಬ್ರಿಟಿಷ್ ಸರಕಾರ ಭಾರತೀಯ ಚರ್ಚ್ ಕಾಯ್ದೆಯನ್ನು ಅಂಗೀಕರಿಸಿತ್ತು. ಅದು ಚರ್ಚ್ಗೆ ದೊಡ್ಡ ಪ್ರಮಾಣದ ಭೂ ಅನುದಾನಕ್ಕೆ ಅನುವು ಮಾಡಿಕೊಟ್ಟಿತು.
ಆರ್ಗನೈಸರ್ ಲೇಖನದಲ್ಲಿ ಕ್ಯಾಥೊಲಿಕ್ ಚರ್ಚ್ ಗಳ ಬಳಿಯಿರುವ ಭೂಮಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಕೆಲವು ಭೂಮಿಯನ್ನು ಪ್ರಶ್ನಾರ್ಹ ವಿಧಾನಗಳ ಮೂಲಕ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಎತ್ತಿದೆ.
ಚರ್ಚ್ ನಡೆಸುವ ಶಾಲೆಗಳು ಮತ್ತು ಆಸ್ಪತ್ರೆಗಳು ಉಚಿತ ಅಥವಾ ಕಡಿಮೆ ವೆಚ್ಚದ ಸೇವೆ ಒದಗಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳನ್ನು ಸೆಳೆಯುತ್ತವೆ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಡ ಹೇರುತ್ತವೆ ಎಂದು ಅನೇಕ ವರದಿಗಳು ಹೇಳುತ್ತವೆ ಎಂದು ಆರ್ಗನೈಸರ್ ಉಲ್ಲೇಖಿಸಿತ್ತು.
ಬುಡಕಟ್ಟು ಮತ್ತು ಗ್ರಾಮೀಣ ಸಮುದಾಯಗಳ ಭೂಮಾಲೀಕರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಮನವೊಲಿಸಿದ ಅಥವಾ ಬಲವಂತಪಡಿಸಿದ ಉದಾಹರಣೆಗಳಿವೆ. ನಂತರ ಅವರ ಭೂಮಿಯನ್ನು ಚರ್ಚ್ ಸಂಬಂಧಿತ ಸಂಸ್ಥೆಗಳು ವಶಪಡಿಸಿಕೊಂಡವು ಎಂಬ ಆರೋಪಗಳ ಬಗ್ಗೆಯೂ ಲೇಖನ ಹೇಳುತ್ತದೆ.
ಚರ್ಚ್ ಈ ಆರೋಪಗಳನ್ನು ನಿರಾಕರಿಸುತ್ತದೆಯಾದರೂ, ಮತಾಂತರ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವಾರು ಅಕ್ರಮ ಭೂಸ್ವಾಧೀನ ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿವೆ ಎಂದು ಲೇಖನ ಉಲ್ಲೇಖಿಸುತ್ತದೆ.
ಇದು ಭಾರತದ ಸಾಮಾಜಿಕ ಧಾರ್ಮಿಕ ಸಂದರ್ಭದಲ್ಲಿ ಮಿಷನರಿ ಸಂಸ್ಥೆಗಳ ಪಾತ್ರದ ಬಗ್ಗೆ ಕಳವಳ ಹೆಚ್ಚಿಸಿದೆ ಎನ್ನುತ್ತದೆ. ಒಂದು ಕಾಲದಲ್ಲಿ ಸ್ಥಳೀಯ ಸಮುದಾಯಗಳಿಗೆ ಸೇರಿದ ಬುಡಕಟ್ಟು ಭೂಮಿಯನ್ನು ಕ್ರಮೇಣ ವಿವಿಧ ನೆಪಗಳ ಅಡಿಯಲ್ಲಿ ಚರ್ಚ್ ಅಧಿಕಾರಿಗಳಿಗೆ ವರ್ಗಾಯಿಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಲೇಖನ ಪ್ರಸ್ತಾಪ ಮಾಡಿದೆ.
ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ವಕ್ಫ್ ಮಸೂದೆಯ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ಲೇಖನ ಪ್ರಕಟವಾಗಿರುವುದರಿಂದ ಮಹತ್ವವನ್ನು ಪಡೆದುಕೊಂಡಿದೆ.
ಈ ಮೊದಲು ಕೇರಳ ಕ್ಯಾಥೊಲಿಕ್ ಬಿಷಪ್ ಗಳ ಮಂಡಳಿ ಮೋದಿ ಸರಕಾರದ ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿತ್ತು. ಕೇರಳದ ಸಂಸದರು ಅದರ ಪರವಾಗಿ ಮತ ಚಲಾಯಿಸಬೇಕು ಎಂದು ಕರೆ ನೀಡಿತ್ತು. ವಕ್ಫ್ ಮಸೂದೆ ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ಪಾಸಾದ ಬೆನ್ನಲ್ಲೇ ಕೇರಳದ ಕ್ರಿಶ್ಚಿಯನ್ ವಲಯದಲ್ಲಿ ಸಂಭ್ರಮಾಚರಣೆ ನಡೆದ ಬಗ್ಗೆಯೂ ವರದಿಯಾಗಿತ್ತು.
ಈಗ ಆರ್ಗನೈಸರ್ ನಲ್ಲಿ ಪ್ರಕಟವಾಗಿ ಡಿಲಿಟ್ ಆದ ಲೇಖನದಿಂದ ಚರ್ಚ್ ಗಳು ಹಾಗೂ ಅವುಗಳ ಭೂಮಿ ಆರೆಸ್ಸೆಸ್ ಮತ್ತು ಬಿಜೆಪಿಯ ಮುಂದಿನ ಗುರಿ ಆಗಲಿವೆಯೇ ಎಂಬ ಪ್ರಶ್ನೆ ಎತ್ತಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಕ್ಫ್ ಬಿಲ್ ಈಗ ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದೆ, ಆದರೆ ಭವಿಷ್ಯದಲ್ಲಿ ಇತರ ಸಮುದಾಯಗಳ ಮೇಲಿನ ದಾಳಿಗೆ ದಾರಿಯಾಗಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ನೋಡಿದರೆ ಆರೆಸ್ಸೆಸ್ ಬಹಳ ಬೇಗ ಕ್ರೈಸ್ತರ ಮೇಲೆ ಕೆಂಗಣ್ಣು ಬೀರಿದೆ. ಇಂತಹ ಎಲ್ಲ ದಾಳಿಗಳಿಂದ ನಮ್ಮನ್ನು ರಕ್ಷಿಸುವುದು ಸಂವಿಧಾನ ಮಾತ್ರ, ಹಾಗಾಗಿ ನಾವೆಲ್ಲರೂ ಸಂವಿಧಾನವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.