ಈದ್ ನಮಾಝ್ ಗೆ ಬಿಡದವರು ವಕ್ಫ್ ಬಗ್ಗೆ ಮಾತನಾಡುತ್ತಾರೆ: ಬಿಜೆಪಿ ವಿರುದ್ಧ ಗೌರವ್ ಗೊಗೊಯ್ ಆಕ್ರೋಶ

Screengrab:X/@ANI
ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನವನ್ನು ದುರ್ಬಲಗೊಳಿಸುವ, ಅಲ್ಪಸಂಖ್ಯಾತ ಸಮುದಾಯಗಳನ್ನು ದೂಷಿಸುವ, ಭಾರತೀಯ ಸಮಾಜವನ್ನು ವಿಭಜಿಸುವ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ ನ ಲೋಕಸಭಾ ಉಪನಾಯಕ ಗೌರವ್ ಗೊಗೊಯ್ ಟೀಕಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ಕುರಿತು ಸಂಸತ್ತಿನ ಚರ್ಚೆಯಲ್ಲಿ ವಿರೋಧ ಪಕ್ಷದ ಪರವಾಗಿ ಗೊಗೊಯ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಮೋದಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಅವರು, ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಮತ್ತು ಇಂದಿನ ವಕ್ಫ್ ತಿದ್ದುಪಡಿ ಮಸೂದೆ ವಿಚಾರದಲ್ಲಿ ಸಹ, ನನಗೆ ಒಂದೇ ಒಂದು ಮಾರ್ಗದರ್ಶಿ ಎಂದರೆ ಅದು ಭಾರತದ ಸಂವಿಧಾನ ಎಂದಿದ್ದಾರೆ.
ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಒದಗಿಸುತ್ತದೆ. ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಪೂಜಾ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಸಮಗ್ರತೆಯನ್ನು ಖಾತ್ರಿಪಡಿಸುವ ಭ್ರಾತೃತ್ವವನ್ನು ಹೇಳುತ್ತದೆ. ಇಂದಿನ ಈ ಮಸೂದೆಯು ಈ ಸಂವಿಧಾನದ ಮೂಲಭೂತ ಒಳಿತಿನ ಮೇಲಿನ ದಾಳಿಯಾಗಿದೆ ಎಂದು ಗೊಗೊಯ್ ಹೇಳಿದ್ದಾರೆ.
ಈ ಸರ್ಕಾರ ಈ ಮಸೂದೆಯ ಮೂಲಕ ನಾಲ್ಕು ಮೂಲಭೂತ ಉದ್ದೇಶಗಳನ್ನು ಹೊಂದಿದೆ. ಮೊದಲ ಮೂಲ ಉದ್ದೇಶ ಸಂವಿಧಾನವನ್ನು ದುರ್ಬಲಗೊಳಿಸುವುದು. ಎರಡನೆಯ ಉದ್ದೇಶ ಗೊಂದಲವನ್ನು ಹರಡುವುದು, ಭಾರತದ ಅಲ್ಪಸಂಖ್ಯಾತ ಸಮುದಾಯಗಳ ಹೆಸರು ಕೆಡಿಸುವುದು. ಮೂರನೇ ಉದ್ದೇಶ ಭಾರತೀಯ ಸಮಾಜವನ್ನು ವಿಭಜಿಸುವುದು. ನಮ್ಮಲ್ಲಿ ಮೊಕದ್ದಮೆಗಳು ಯಾವಾಗಲೂ ಮುಂದುವರಿಯಬೇಕು ಎಂಬುದು ಅವರ ಉದ್ದೇಶ ಮತ್ತು ನಾಲ್ಕನೆಯ ಉದ್ದೇಶ ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಎಂದಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷದ ಪ್ರತಿವಾದವನ್ನು ಗೊಗೊಯ್ ಮಂಡಿಸಿದ್ದಾರೆ.
ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸಿ ಜೆಪಿಸಿ ಚರ್ಚೆ ನಡೆದಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಿಜಿಜು ಅವರ ಹೇಳಿಕೆಗಳನ್ನು ಗೊಗೊಯ್ ಅಲ್ಲಗಳೆದಿದ್ದಾರೆ. ನಿಬಂಧನೆವಾರು ಚರ್ಚೆಯನ್ನು ಜೆಪಿಸಿ ನಡೆಸಿಲ್ಲ ಎಂದು ಗೊಗೊಯ್ ಆರೋಪಿಸಿದ್ದಾರೆ.
ವಿರೋಧ ಪಕ್ಷಗಳು ಸೂಚಿಸಿದ ಒಂದೇ ಒಂದು ತಿದ್ದುಪಡಿಯನ್ನು ಅಂಗೀಕರಿಸಲಾಗಿಲ್ಲ ಎಂದು ಗೊಗೊಯ್ ಹೇಳಿದ್ದಾರೆ. ಜೆಪಿಸಿಯಲ್ಲಿ ವಕ್ಫ್ ಬಗ್ಗೆ ಗೊತ್ತೇ ಇಲ್ಲದವರೇ ಇದ್ದರು ಎಂದು ಕೂಡ ಅವರು ಟೀಕಿಸಿದ್ದಾರೆ.
ಮಸೂದೆಯನ್ನು ಸಚಿವರು ಪರಿಚಯಿಸಿದ ದಿನವೂ ನಾನು ಅವರ ಮಾತುಗಳನ್ನು ಆಲಿಸಿದ್ದೇನೆ. ಇಂದು ಕೂಡ ಅವರ ಮಾತುಗಳನ್ನು ಕೇಳಿದೆ, ಅವರು ಅದನ್ನು ಪರಿಚಯಿಸಿದ ದಿನವೂ, ಮಸೂದೆಯನ್ನು ತರುವ ಮೊದಲು ಬಹಳ ವಿವರವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ವ್ಯವಹಾರಗಳ ಸಮಿತಿ ಈ ವಿಚಾರವಾಗಿ ಇದುವರೆಗಿನ ಐದು ಸಭೆಗಳ ನಿರ್ಣಯಗಳನ್ನು ಸದನದ ಮುಂದಿಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಯಾವುದೇ ಸಭೆಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಅಗತ್ಯದ ಬಗ್ಗೆ ಯಾವುದೇ ಪ್ರಸ್ತಾಪವಾಗಲಿಲ್ಲ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಯಾವುದೇ ಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಅಗತ್ಯವಿದೆ ಎಂದು ಒಂದೇ ಒಂದು ಹೇಳಿಕೆ ಇರಲಿಲ್ಲ ಎಂದು ಗೊಗೊಯ್ ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ತಮ್ಮ ಮಾತುಗಳಲ್ಲಿ ಗೊಗೊಯ್, ಸರ್ಕಾರ ಭವಿಷ್ಯದಲ್ಲಿ ಇತರ ಅಲ್ಪಸಂಖ್ಯಾತರನ್ನು ಸಹ ಗುರಿಯಾಗಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ದೇಶದ ವಿವಿಧ ಸ್ಥಳಗಳಲ್ಲಿ ಜನರು ಈದ್ ಹಬ್ಬದ ಶುಭಾಶಯ ಕೋರಿದರು. ಆದರೆ ಡಬಲ್ ಎಂಜಿನ್ ಸರ್ಕಾರ ಜನರಿಗೆ ಈದ್ ನಮಾಝ್ ಮಾಡಲೂ ಅವಕಾಶ ನೀಡಲಿಲ್ಲ. ನೀವು ಅಲ್ಪಸಂಖ್ಯಾತ ಸಮುದಾಯಕ್ಕೆ ನಿಮ್ಮ ಸಂತಾಪ ಸೂಚಿಸುತ್ತೀರಿ. ಲೋಕಸಭೆಯಲ್ಲಿ ನಿಮ್ಮ ಎಷ್ಟು ಅಲ್ಪಸಂಖ್ಯಾತ ಸಂಸದರಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ಮೊದಲು ಅದರ ವಿವರಗಳನ್ನು ನಮಗೆ ನೀಡಿ ಮತ್ತು ನಂತರ ನಿಮ್ಮ ಹೃದಯದಲ್ಲಿ ಎಷ್ಟು ಸಹಾನುಭೂತಿ ಇದೆ ಎಂದು ಹೇಳಿ ಎಂದು ಗೊಗೊಯ್ ಸವಾಲು ಹಾಕಿದ್ದಾರೆ.
ಇಂದು, ಒಂದು ಸಮುದಾಯದ ಭೂಮಿಯನ್ನು ಗುರಿಯಾಗಿಸಿಕೊಳ್ಳಲಾಗಿದೆ. ನಾಳೆ, ಸರ್ಕಾರ ಇನ್ನೊಂದು ಸಮುದಾಯದ ಭೂಮಿಯನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದು ವಕ್ಫ್ ನಿರ್ವಹಣೆಗೆ ಸಂಬಂಧಿಸಿದೆಯೇ ಹೊರತು, ಇತರರ ಧರ್ಮಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ರಿಜಿಜು ಸ್ಪಷ್ಟನೆಯನ್ನು ಗೊಗೊಯ್ ಪ್ರಶ್ನಿಸಿದ್ದಾರೆ.
ಒಬ್ಬ ವ್ಯಕ್ತಿ ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಪಾಲಿಸಿದರೆ ಮಾತ್ರ ಆಸ್ತಿಯನ್ನು ವಕ್ಫ್ ಎಂದು ಘೋಷಿಸಬಹುದು ಎಂಬ ತಿದ್ದುಪಡಿಯನ್ನು ಎತ್ತಿ ತೋರಿಸುತ್ತಾ, ನೀವು ಐದು ವರ್ಷಗಳನ್ನು ಪೂರ್ಣಗೊಳಿಸಿದ್ದರೂ ಅಥವಾ ಪೂರ್ಣಗೊಳಿಸದೇ ಇದ್ದರೂ ಅವರು ಇತರ ಧರ್ಮಗಳಿಂದ ಪ್ರಮಾಣಪತ್ರ ಕೇಳುತ್ತಾರೆಯೇ? ಈ ಮಸೂದೆಯಲ್ಲಿ ಇದನ್ನು ಏಕೆ ಕೇಳಲಾಗುತ್ತಿದೆ? ಸರ್ಕಾರ ಈ ಧರ್ಮದ ವಿಷಯದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಿದೆ ಎಂದು ಗೊಗೊಯ್ ಪ್ರಶ್ನಿಸಿದ್ದಾರೆ.
ನಮ್ಮದು ಪ್ರತಿಯೊಂದು ಧರ್ಮ, ಪ್ರತಿಯೊಂದು ಸಂಸ್ಕೃತಿ, ಪ್ರತಿಯೊಂದು ಸಂಪ್ರದಾಯವನ್ನು ಗೌರವಿಸುವ ಸನಾತನ ಧರ್ಮದ ದೇಶ, ಆದರೆ ಇಂದು ಅಲ್ಪಸಂಖ್ಯಾತರು ತಮ್ಮ ಧರ್ಮ ಯಾವುದೆಂಬುದಕ್ಕೆ ಸರ್ಕಾರಕ್ಕೆ ಪ್ರಮಾಣಪತ್ರ ನೀಡಬೇಕಾಗಿರುವುದು ದುಃಖಕರ. ಕಳೆದ 5 ವರ್ಷಗಳಲ್ಲಿ ಅದು ಸಂಭವಿಸಿದೆಯೋ ಇಲ್ಲವೋ, ಈ ಮಸೂದೆಯಲ್ಲಿ ಮಾತ್ರ ಇದು ಆಗಿದೆ ಎಂದಿದ್ದಾರೆ. ನೀವು ಯಾವ ರೀತಿಯ ನ್ಯಾಯವನ್ನು ಮಾಡುತ್ತಿದ್ದೀರಿ, ಯಾವ ರೀತಿಯ ಕಾನೂನನ್ನು ಮಾಡುತ್ತಿದ್ದೀರಿ ಎಂದು ಗೊಗೊಯ್ ಪ್ರಶ್ನಿಸಿದ್ದಾರೆ.
ಮಸೂದೆಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ಭಾರತದಲ್ಲಿ ಹೆಚ್ಚಿನ ಮೊಕದ್ದಮೆಗಳಿಗೆ ಕಾರಣವಾಗುತ್ತವೆ ಎಂದು ಗೊಗೊಯ್ ಹೇಳಿದ್ದಾರೆ. ತಿದ್ದುಪಡಿಗಳು ಮಸೂದೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರಬೇಕೇ ಹೊರತು, ಹೆಚ್ಚಿನ ವಿವಾದಗಳನ್ನು ಸೃಷ್ಟಿಸುವುದಲ್ಲ ಎಂದು ಗೊಗೊಯ್ ಹೇಳಿದ್ದಾರೆ.