ಉತ್ತರ ಪ್ರದೇಶ | ಗುಂಡಿಕ್ಕಿ ಐಎಎಫ್ ನ ಸಿವಿಲ್ ಎಂಜಿನಿಯರ್ ಹತ್ಯೆ

ಸಾಂದರ್ಭಿಕ ಚಿತ್ರ
ಲಕ್ನೋ : ಪ್ರಯಾಗ್ ರಾಜ್ ನ ಬಾಮ್ರೌಲಿಯ ಸೆಂಟ್ರಲ್ ಏರ್ ಕಮಾಂಡ್ ಸೆಂಟರ್ ನಲ್ಲಿ ನಿಯೋಜಿಸಲಾಗಿದ್ದ ‘ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್’ನ ಹಿರಿಯ ಸಿವಿಲ್ ಎಂಜಿನಿಯರ್ ಓರ್ವರನ್ನು ಶನಿವಾರ ಮುಂಜಾನೆ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.
ಸಂಗಮ್ ನಗರದ ಪೊರಾಮುಫ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಸಿವಿಲ್ ಎಂಜಿನಿಯರ್ ಬಿಹಾರ್ ಮೂಲದ ಸತ್ಯೇಂದ್ರ ನಾಥ್ ಮಿಶ್ರಾ (51) ಎಂದು ಗುರುತಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಶನಿವಾರ ಮುಂಜಾನೆ 3 ಗಂಟೆಗೆ ಅವರ ನಿವಾಸದ ಕಿಟಕಿ ಬಾಗಿಲು ಬಡಿದು ಹೊರಗೆ ಕರೆದಿದ್ದಾರೆ. ಮಿಶ್ರಾ ಅವರು ಕಿಟಕಿಯ ಬಾಗಿಲು ತೆರೆಯುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಅನಂತರ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಿಶ್ರಾ ಅವರನ್ನು ಕೂಡಲೇ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ವೇಳೆ ಮೃತಪಟ್ಟರು.
ತನಿಖಾ ತಂಡ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸೇಡಿನ ಆಯಾಮದ ಕುರಿತು ತನಿಖೆ ನಡೆಸುತ್ತಿದೆ.