ಮೋಹನಲಾಲ್ ನಟನೆಯ ‘ಎಂಪುರಾನ್’ನಲ್ಲಿ 2.08 ನಿಮಿಷದ ದೃಶ್ಯಗಳನ್ನು ತೆಗೆದುಹಾಕಿದ ನಿರ್ಮಾಪಕರು

ಎಂಪುರಾನ್ | PC : X
ತಿರುವನಂತಪುರ,ಎ.1: ಮೋಹನಲಾಲ್ ಅಭಿನಯದ ಚಿತ್ರ‘ಎಲ್2:ಎಂಪುರಾನ್’ ಮಾ.27ರಂದು ಬಿಡುಗಡೆಗೊಂಡ ಬಳಿಕ ಬಲಪಂಥೀಯರ ನಿರಂತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಿರ್ಮಾಪಕರು ಚಿತ್ರದಲ್ಲಿ ಒಟ್ಟು 2.08 ನಿಮಿಷಗಳ 24 ‘ಸ್ವಯಂಪ್ರೇರಿತ ಕಡಿತ’ಗಳನ್ನು ಮಾಡಿದ್ದಾರೆ. ಕೇಂದ್ರೀಯ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ)ಯ ಪ್ರಾದೇಶಿಕ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು ಪಡೆದಿರುವ ಚಿತ್ರದ ಪರಿಷ್ಕೃತ ಆವೃತ್ತಿಯು ಬುಧವಾರ ಭಾರತದಲ್ಲಿಯ ಹೆಚ್ಚಿನ ಚಿತ್ರಮಂದಿರಗಳ ತೆರೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಮರು-ಸೆನ್ಸಾರ್ ಪ್ರಮಾಣ ಪತ್ರದ ಪ್ರಕಾರ ಪ್ರಮುಖ ಬದಲಾವಣೆಗಳಲ್ಲಿ ಬಲರಾಜ್ ಅಲಿಯಾಸ್ ಬಾಬಾ ಬಜರಂಗಿ ಪಾತ್ರದ ಹೆಸರು ಒಂದಾಗಿದೆ. ಇದು 2002ರ ಗುಜರಾತ್ ಗಲಭೆಗಳ ಸಂದರ್ಭ ನರೋಡಾ ಪಾಟಿಯಾ ಹತ್ಯಾಕಾಂಡದ ರೂವಾರಿಯಾಗಿದ್ದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಜರಂಗ ದಳ ನಾಯಕ ಬಾಬು ಬಜರಂಗಿಯನ್ನು ಉಲ್ಲೇಖಿಸಿದಂತಿದ್ದು,ಪರಿಷ್ಕತ ಆವೃತ್ತಿಯಲ್ಲಿ ಪಾತ್ರಕ್ಕೆ ಬಲದೇವ್ ಎಂದು ಮರುನಾಮಕರಣ ಮಾಡಲಾಗಿದೆ. ಘಟನಾವಳಿಗಳ ಅವಧಿಯನ್ನು ‘ಇಂಡಿಯಾ 2002’ ಎಂದು ತೋರಿಸಿದ್ದ ಡಿಸ್‌ಪ್ಲೇ ಕಾರ್ಡ್‌ನಲ್ಲಿ ಅದನ್ನು ‘ಕೆಲವು ವರ್ಷಗಳ ಹಿಂದೆ’ ಎಂದು ಬದಲಿಸಲಾಗಿದೆ.
ಧಾರ್ಮಿಕ ಕಟ್ಟಡವೊಂದರ ಎದುರಿನಿಂದ ಹಾದು ಹೋಗುತ್ತಿರುವ ವಾಹನಗಳು,ಮಹಿಳೆಯರ ವಿರುದ್ಧ ಹಿಂಸಾಚಾರ ಮತ್ತು ಗಲಭೆ ಸ್ಥಳಗಳಲ್ಲಿಯ ಮೃತದೇಹಗಳ ದೃಶ್ಯಗಳನ್ನೂ ಚಿತ್ರದಿಂದ ತೆಗೆದುಹಾಕಲಾಗಿದೆ. ಗಲಭೆಯ ಸಂದರ್ಭದಲ್ಲಿ ಯುವಕ ಜಾವೇದ್ ಮಸೂದ್(ಈ ಪಾತ್ರವನ್ನು ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸಿದ್ದಾರೆ) ಮತ್ತು ಆತನ ತಂದೆ ಮಸೂದ್ ನಡುವಿನ ಸಂಭಾಷಣೆಯನ್ನು ತೆಗೆಯಲಾಗಿದೆ. ರಾಜಕೀಯ ವಿರೋಧಿಗಳ ವಿರುದ್ಧ ಆಡಳಿತ ಪಕ್ಷವು ಬಳಸುತ್ತಿದೆ ಎಂದು ತೋರಿಸಲಾಗಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಉಲ್ಲೇಖವೂ ಕತ್ತರಿ ಪ್ರಯೋಗಕ್ಕೆ ಗುರಿಯಾಗಿದೆ. ಎನ್‌ಐಎ ಉಲ್ಲೇಖವಿರುವ ಪ್ರತಿಯೊಂದು ದೃಶ್ಯದಲ್ಲಿಯೂ ಆಡಿಯೊವನ್ನು ಮೌನವಾಗಿಸಲಾಗಿದೆ.
ಚಿತ್ರದ ಕ್ರೆಡಿಟ್‌ಗಳ ಪಟ್ಟಿಯಿಂದ ನಟ ಹಾಗೂ ಕೇಂದ್ರ ಸಚಿವ ಸುರೇಶ ಗೋಪಿ ಮತ್ತು ಐಆರ್‌ಎಸ್ ಅಧಿಕಾರಿ ಜ್ಯೋತಿಸ್ ಮೊಹನ್ ಅವರ ಹೆಸರುಗಳನ್ನೂ ತೆಗೆಯಲಾಗಿದೆ.
ಯಾವುದೇ ಕಡಿತವಿಲ್ಲದೆ ಮೂಲ ಚಿತ್ರವು ದೇಶದ ಹೊರಗೆ ಪ್ರದರ್ಶನವನ್ನು ಮುಂದುವರಿಸಲಿದೆ,ಆದರೆ ಕಡಿತಗಳೊಂದಿಗೆ ಪರಿಷ್ಕೃತ ಆವೃತ್ತಿ ಒಟಿಟಿಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.
ಚಿತ್ರವನ್ನು ಪರಿಷ್ಕರಿಸಲಾಗಿದೆ ಎಂಬ ವರದಿಗಳು ಟಿಕೆಟ್‌ಗಳಿಗೆ ಭಾರೀ ಬೇಡಿಕೆಯನ್ನು ಸೃಷ್ಟಿಸಿದ್ದು,ಗುರುವಾರ ಬಿಡುಗಡೆಗೊಂಡಾಗಿನಿಂದಲೂ ಚಿತ್ರವು ಕೇರಳದಾದ್ಯಂತ ಹೌಸ್‌ಪುಲ್ ಪ್ರದರ್ಶನಗಳನ್ನು ಕಾಣುತ್ತಿದೆ.
ಬಲಪಂಥೀಯರ ಪ್ರತಿಭಟನೆ ಮುಂದುವರಿದಿದ್ದರೂ ಚಿತ್ರದ ನಿರ್ಮಾಪಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಿರುವ ಸಿಪಿಎಂ ಮತ್ತು ಕಾಂಗ್ರೆಸ್ ನಾಯಕರು ಥಿಯೇಟರ್‌ಗಳಲ್ಲಿ ಯಾವುದೇ ಕಡಿತವಿಲ್ಲದ ಮೂಲ ಆವೃತ್ತಿಯನ್ನು ವೀಕ್ಷಿಸಿದ್ದಾರೆ.
ಚಿತ್ರವು ಮಾ.31ರವರೆಗೆ ವಿಶ್ವಾದ್ಯಂತ 200 ಕೋ.ರೂ.ಗಳ ಒಟ್ಟು ಆದಾಯವನ್ನು ಗಳಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.