ಕುನಾಲ್ ಕಾರ್ಯಕ್ರಮಗಳ ಟಿಕೆಟ್ ಮಾರಾಟ ಸ್ಥಗಿತಗೊಳಿಸಿದ ಬುಕ್ ಮೈ ಶೋ
Update: 2025-04-05 21:07 IST

ಕುನಾಲ್ ಕಾಮ್ರಾ | PC : PTI
ಹೊಸದಿಲ್ಲಿ: ಆನ್‌ಲೈನ್ ಟಿಕೆಟ್ ಮಾರಾಟ ವೇದಿಕೆ ‘ಬುಕ್‌ಮೈಶೋ’ ಶನಿವಾರ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾಗೆ ಸಂಬಂಧಿಸಿದ ಕಾರ್ಯಕ್ರಮಗಳ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಿದೆ. ಜೊತೆಗೆ, ತನ್ನ ವೆಬ್ ಸೈಟ್ ನಲ್ಲಿರುವ ಕಲಾವಿದರ ಪಟ್ಟಿಯಿಂದಲೂ ಕುನಾಲ್ ಕಾಮ್ರಾರನ್ನು ಅದು ತೆಗೆದುಹಾಕಿದೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.
ಕುನಾಲ್ ಕಾಮ್ರಾರ ಮುಂಬರುವ ಕಾರ್ಯಕ್ರಮಗಳ ಟಿಕೆಟ್ ಮಾರಾಟವನ್ನು ನಿಲ್ಲಿಸುವಂತೆ ಸೂಚಿಸಿ ಯುವ ಶಿವ ಸೇನೆಯ ಪ್ರಧಾನ ಕಾರ್ಯದರ್ಶಿ ರಾಹುಲ್ ಎನ್. ಕನಾಲ್ ಇತ್ತೀಚೆಗೆ ಬುಕ್ ಮೈ ಶೋ ಗೆ ಪತ್ರ ಬರೆದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ರಾಹುಲ್ ಕನಾಲ್ ತನ್ನ ಎಪ್ರಿಲ್ 2ರ ಪತ್ರದಲ್ಲಿ, ಕುನಾಲ್ ಕಾಮ್ರಾರ ವಿವಾದಾಸ್ಪದ ಕಾರ್ಯಕ್ರಮಗಳು ಮತ್ತು ಸಾರ್ವಜನಿಕರ ಭಾವೆನಗಳ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.