‘ಸಹಯೋಗ’ವನ್ನು ‘ಸೆನ್ಸಾರ್‌ಶಿಪ್ ಪೋರ್ಟಲ್’ ಎಂದು ಕರೆಯುವ ಎಕ್ಸ್ ನಿರ್ಧಾರ ದುರದೃಷ್ಟಕರ, ಖಂಡನೀಯ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರದ ನಿವೇದನೆ

Update: 2025-03-29 22:22 IST
‘ಸಹಯೋಗ’ವನ್ನು ‘ಸೆನ್ಸಾರ್‌ಶಿಪ್ ಪೋರ್ಟಲ್’ ಎಂದು ಕರೆಯುವ ಎಕ್ಸ್ ನಿರ್ಧಾರ ದುರದೃಷ್ಟಕರ, ಖಂಡನೀಯ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರದ ನಿವೇದನೆ

ಕರ್ನಾಟಕ ಹೈಕೋರ್ಟ್‌

  • whatsapp icon

ಹೊಸದಿಲ್ಲಿ: ಹಾನಿಕಾರಕ ವಿಷಯಗಳಿಗೆ ಪ್ರವೇಶವನ್ನು ನಿರ್ಬಂಧಿಸುವಂತೆ ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡಲು ಬಳಸಿರುವ ಕಾನೂನಿನ ಬಗ್ಗೆ ಎಕ್ಸ್(ಹಿಂದಿನ ಟ್ವಿಟರ್) ನ್ಯಾಯಾಲಯದ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸರಕಾರವು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರಕಾರದ ಸಹಯೋಗ ಪೋರ್ಟಲ್‌ ನ್ನು ‘ಸೆನ್ಸಾರ್‌ಶಿಪ್ ಪೋರ್ಟಲ್’ ಎಂದು ಕರೆಯುವ ಎಕ್ಸ್ ನಿರ್ಧಾರವು ದುರದೃಷ್ಟಕರ ಮತ್ತು ಖಂಡನೀಯವಾಗಿದೆ ಎಂದು ಅದು ಹೇಳಿದೆ.

ಇದಕ್ಕೂ ಮುನ್ನ ಮೈಕ್ರೋಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್‌ ಅನ್ನು ನಡೆಸುತ್ತಿರುವ ಎಕ್ಸ್-ಕಾರ್ಪ್,ಸೈಬರ್ ಅಪರಾಧವನ್ನು ತಡೆಯುವ ಉದ್ದೇಶವನ್ನು ಹೊಂದಿರುವ ಸಹಯೋಗ ಪೋರ್ಟಲ್‌ಗೆ ಸೇರುವಂತೆ ತನ್ನನ್ನು ಬಲವಂತಗೊಳಿಸುವಂತಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಮಾನ್ಯವಾದ ಕಾನೂನುಬದ್ಧ ಮನವಿಗಳನ್ನು ಸಂಸ್ಕರಿಸಲು ತಾನು ತನ್ನದೇ ಆದ ಪೋರ್ಟಲ್ ಹೊಂದಿದ್ದೇನೆ ಎಂದು ಅದು ವಾದಿಸಿತ್ತು.

ಶ್ರೇಯಾ ಸಿಂಗಾಲ್ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿ ತೋರಿಸಿದ್ದ ಎಕ್ಸ್-ಕಾರ್ಪ್, ಪೋರ್ಟಲ್ ನಿರ್ದಿಷ್ಟ ಸಂದರ್ಭಗಳಲ್ಲಿ ಮಾಹಿತಿಯನ್ನು ನಿರ್ಬಂಧಿಸಲು ಆನ್‌ಲೈನ್ ವೇದಿಕೆಗಳಿಗೆ ಆದೇಶಿಸಲು ಸರಕಾರಕ್ಕೆ ಅಧಿಕಾರ ನೀಡಿರುವ ಐಟಿ ಕಾಯ್ದೆ,2000ರ 69ಎ ಕಲಮ್‌ನ ಶಾಸನಬದ್ಧ ವ್ಯಾಪ್ತಿಯಿಂದ ಹೊರಗಿದೆ ಎಂದು ವಾದಿಸಿತ್ತು.

ಸರಕಾರದ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಎಕ್ಸ್-ಕಾರ್ಪ್ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಶುಕ್ರವಾರ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ಕೇಂದ್ರವು,ಐಟಿ ಕಾಯ್ದೆ,2000ರ 69ಎ ಕಲಮ್‌ ನಡಿ ಮಾತ್ರ ನಿರ್ಬಂಧ ಆದೇಶಗಳನ್ನು ಹೊರಡಿಸಲು ಅವಕಾಶ ನೀಡಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ನುಣುಚಿಕೊಳ್ಳಲು ಅಧಿಕಾರಿಗಳು ಅದೇ ಕಾಯ್ದೆಯ 79(3)(ಡಿ) ಕಲಮ್‌ ನಡಿ ಮಾಹಿತಿ ನಿರ್ಬಂಧ ಆದೇಶಗಳನ್ನು ಹೊರಡಿಸುತ್ತಿದ್ದಾರೆ ಎಂದು ಎಕ್ಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ತಿಳಿಸಿದೆ. 69ಎ ಮತ್ತು 79(3)(ಡಿ) ಕಲಮ್‌ಗಳನ್ನು ಅದು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದೂ ಸರಕಾರವು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News