ಮ್ಯಾನ್ಮಾರ್ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಮರಳಲು ಭಾರತದ ನೆರವಿನ ಭರವಸೆ

PC: x.com/BJP4India
ಹೊಸದಿಲ್ಲಿ: ಗಲಭೆ ಪೀಡಿತ ಮ್ಯಾನ್ಮಾರ್, ಎಲ್ಲರನ್ನೂ ಒಳಗೊಂಡ ಮತ್ತು ವಿಶ್ವಾಸಾರ್ಹ ಚುನಾವಣೆಯ ಮೂಲಕ ಆದಷ್ಟು ಶೀಘ್ರವಾಗಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಮರಳುವುದು ಅಗತ್ಯ. ಇದಕ್ಕೆ ಅಗತ್ಯವಿರುವ ಸಹಕಾರವನ್ನು ನೀಡಲು ಭಾರತ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ ಹಿರಿಯ ಜನರಲ್ ಮಿನ್ ಆಂಗ್ ಲೈಂಗ್ ಜತೆ ಮಾತುಕತೆ ನಡೆಸಿದ ಅವರು, ಭಾರತ ಈ ಹಿಂದೆ ನೆರವು ನೀಡಿದಂತೆ ದೇಶದ ಶಾಂತಿಯುತ, ಸ್ಥಿರ ಮತ್ತು ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಮ್ಯಾನ್ಮಾರ್ ಮರಳುವ ನಿಟ್ಟಿನಲ್ಲಿ ಮತ್ತು ವಿಶ್ವಾಸ ಹಾಗೂ ಮುನ್ನಡೆಯನ್ನು ಸಾಧಿಸುವ ಪ್ರಯತ್ನಗಳನ್ನು ಭಾರತ ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದರು.
ದೇಶ ಜನಾಂಗೀಯ ಸಂಘರ್ಷದಿಂದ ಜರ್ಜರಿತವಾಗಿರುವ ನಡುವೆ ಬಿಮ್ ಸ್ಟೆಕ್ ಶೃಂಗದಲ್ಲಿ ಭಾಗವಹಿಸುವ ಸಲುವಾಗಿ ಜುಂಟಾ ಮುಖ್ಯಸ್ಥರು ಅಪರೂಪಕ್ಕೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇತ್ತೀಚೆಗೆ ಮ್ಯಾನ್ಮಾರ್ ನಲ್ಲಿ ನಡೆದ ಭೂಕಂಪದಿಂದ ಆದ ಜೀವಹಾನಿ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಮಾನವೀಯ ನೆರವು, ವಿಕೋಪ ಪರಿಹಾರ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ಆಪರೇಷನ್ ಬ್ರಹ್ಮ ಮುಂದುವರಿದಿದೆ ಎಂದು ವಿವರಿಸಿದರು.
ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ ಭಾರತವು ಮ್ಯಾನ್ಮಾರ್ ನ ಸೇನೆಯ ಜತೆ ತೊಡಗಿಸಿಕೊಳ್ಳುವಿಕೆಯನ್ನು ಮುಂದುವರಿಸಲಿದೆ. ಏಕೆಂದರೆ ಗಡಿಭಾಗದಲ್ಲಿ ನುಸುಳುಕೋರರ ಚಟುವಟಿಕೆಗಳನ್ನು ತಡೆಯಲು ಏಷ್ಯನ್ ದೇಶಗಳಲ್ಲಿ ಪರಸ್ಪರ ಸಹಕಾರ ಅಗತ್ಯ ಎಂದು ಭಾರತ ಸ್ಪಷ್ಟಪಡಿಸಿದೆ.
ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ಗಡಿಭಾಗದಿಂದ ನಡೆಯುತ್ತಿದ್ದ ಸೈಬರ್ ದಂಧೆಯಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಪ್ರಜೆಗಳ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಮ್ಯಾನ್ಮಾರ್ ನೀಡಿದ ನೆರವನ್ನು ಮೋದಿ ಶ್ಲಾಘಿಸಿದರು.