ರಾಜಸ್ಥಾನ ಬಿಸಿಗಾಳಿಯಿಂದ ತತ್ತರಿಸಿರುವಾಗ ರಜೆ ಹಾಕಿ ಕಾಶ್ಮೀರಕ್ಕೆ ಹೋದ ಐಎಎಸ್ ಅಧಿಕಾರಿ!

ಜಿಲ್ಲಾಧಿಕಾರಿ ನೀಲಭ್ ಸಕ್ಸೇನಾ (Photo credit: thebuckstopper.com)
ಶ್ರೀನಗರ: ಬಿಸಿಗಾಳಿಯಿಂದ ತತ್ತರಿಸಿರುವ ರಾಜಸ್ಥಾನದ ಹಿರಿಯ ಐಎಎಸ್ ಅಧಿಕಾರಿಯ ಕಾಶ್ಮೀರ ಪ್ರವಾಸ ಬಿಸಿ ಬಿಸಿ ಚರ್ಚೆಯನ್ನು ಹುಟ್ಟು ಹಾಕಿದೆ. ಕರೌಲಿ ಜಿಲ್ಲೆಯು ಬಿಸಿಗಾಳಿ, ವಿದ್ಯುತ್, ನೀರಿನ ಕೊರತೆಯಿಂದ ಕಂಗೆಟ್ಟಿದ್ದರೂ ಜಿಲ್ಲಾಧಿಕಾರಿ ನೀಲಭ್ ಸಕ್ಸೇನಾ ರಜೆ ಹಾಕಿ ಕಾಶ್ಮೀರ ಪ್ರವಾಸಕ್ಕೆ ತೆರಳಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
2015ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ನೀಲಭ್ ಸಕ್ಸೇನಾ ಕರೌಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತಾಗಿ ತವರೂರು ಲಕ್ನೋಗೆ ತೆರಳಬೇಕೆಂದು ಕಾರಣ ಹೇಳಿ ಸೆಕ್ಸೇನಾ ರಜೆಗಾಗಿ ಮನವಿ ಮಾಡಿದ್ದರು. ಅವರಿಗೆ ರಜೆಯನ್ನು ಮಂಜೂರು ಮಾಡಲಾಗಿತ್ತು.
ಕರೌಲಿ ಮತ್ತು ಸವಾಯಿ ಮಾಧೋಪುರ್ ಜಿಲ್ಲೆಗಳಲ್ಲಿ ಬಿಸಿಗಾಳಿ ಮತ್ತು ತೀವ್ರ ನೀರಿನ ಕೊರತೆ ಬಗ್ಗೆ ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಸುಧಾಂಶ್ ಪಂತ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆನ್‌ಲೈನ್ ಸಭೆ ನಡೆದಿತ್ತು. ಸಭೆಯಲ್ಲಿ ಸಕ್ಸೇನಾ ಲಕ್ನೋದಲ್ಲಿಲ್ಲ, ಬದಲಾಗಿ ಕಾಶ್ಮೀರದಲ್ಲಿ ರಜೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ವೀಡಿಯೊ ಸಭೆಯಲ್ಲಿ ಸಕ್ಸೇನಾ ಕಾಶ್ಮೀರದಲ್ಲಿ ಇರುವುದಾಗಿ ಒಪ್ಪಿಕೊಂಡಾಗ, ಮುಖ್ಯ ಕಾರ್ಯದರ್ಶಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು. ಅವರ ಆಡಳಿತಾತ್ಮಕ ಸೂಕ್ಷ್ಮತೆ ಬಗ್ಗೆ ಪ್ರಶ್ನಿಸಿದರು. ನಿಮ್ಮ ಊರಿನಲ್ಲಿ ತುರ್ತು ಕೆಲಸಕ್ಕಾಗಿ ನಿಮಗೆ ರಜೆ ನೀಡಲಾಗಿತ್ತು. ನೀವು ಕಾಶ್ಮೀರ ಪ್ರವಾಸದ ಬಗ್ಗೆ ಮೊದಲೇ ನಮಗೆ ತಿಳಿಸಿದ್ದರೆ, ರಜೆಯನ್ನು ರದ್ದುಗೊಳಿಸಬಹುದಿತ್ತು. ನಿಮ್ಮ ಜಿಲ್ಲೆಯ ಜನರು ತಾಪಮಾನದಿಂದ, ವಿದ್ಯುತ್ ಮತ್ತು ನೀರಿನ ಕೊರತೆಯಿಂದ ತೊಂದರೆಗೊಳಗಾಗಿದ್ದಾರೆ. ಆದರೆ, ನೀವು ತಂಪಾದ ವಾತಾವರಣದಲ್ಲಿ ರಜೆಯನ್ನು ಕಳೆಯುತ್ತಿದ್ದೀರಿ. ಈ ನಡವಳಿಕೆಯು ಬೇಜವಾಬ್ದಾರಿಯುತವಾಗಿದೆ ಎಂದು ಸುಧಾಂಶ್ ಪಂತ್ ಹೇಳಿದರು.
2014ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 12ನೇ ರ‍್ಯಾಂಕ್ ಪಡೆದಿದ್ದ ಸಕ್ಸೇನಾ, ವೃತ್ತಿಜೀವನದಲ್ಲಿ ಯಾವುದೇ ಕಳಂಕವನ್ನು ಹೊಂದಿಲ್ಲ. ಆದರೆ, ಸಕ್ಸೇನಾ ಅವರ ಪ್ರವಾಸದ ಸಮಯ ಮತ್ತು ಸ್ಥಳ ಎಲ್ಲರಲ್ಲೂ ಚರ್ಚೆಯನ್ನು ಹುಟ್ಟುಹಾಕಿದೆ. ವಿಶೇಷವಾಗಿ ಕರೌಲಿಯ ನಿವಾಸಿಗಳು ತೀವ್ರ ತಾಪಮಾನದ ಪರಿಣಾಮ ವಿದ್ಯುತ್ ಕಡಿತ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಜಿಲ್ಲಾಧಿಕಾರಿಯ ಪ್ರವಾಸವು ಟೀಕೆಗೆ ಕಾರಣವಾಗಿದೆ.
ನೀಲಭ್ ಸಕ್ಸೇನಾ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಶೀಲಿಸಿ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.