ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣ: ತೇಲ್ತುಂಬ್ಡೆ ವಿದೇಶ ಪ್ರಯಾಣಕ್ಕೆ ಎನ್‌ಐಎ ವಿರೋಧ

ಆನಂದ್ ತೇಲ್ದುಂಬ್ಡೆ | PC : NDTV
ಮುಂಬೈ: ವಿದೇಶಕ್ಕೆ ತೆರಳು ಅನುಮತಿ ನೀಡುವಂತೆ ಕೋರಿ ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಹೋರಾಟಗಾರ ಆನಂದ್ ತೇಲ್ದುಂಬ್ಡೆ ಅವರು ಸಲ್ಲಿಸಿದ ಅರ್ಜಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ವಿರೋಧ ವ್ಯಕ್ತಪಡಿಸಿದೆ.
ಅವರು ಪರಾರಿಯಾಗುವ ಹಾಗೂ ಆಶ್ರಯ ಕೋರುವ ಸಾಧ್ಯತೆ ಇದೆ ಎಂದು ಎನ್‌ಐಎ ಹೇಳಿದೆ.
ಶೈಕ್ಷಣಿಕ ಉದ್ದೇಶಕ್ಕಾಗಿ ಎಪ್ರಿಲ್ ಹಾಗೂ ಮೇಯಲ್ಲಿ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡುವಂತೆ ಕೋರಿ ತೇಲ್ತುಂಬ್ಡೆ ಅವರು ಕಳೆದ ತಿಂಗಳು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಸ್ತುತ ಜಾಮೀನಿನಲ್ಲಿ ಹೊರಗಿರುವ ತೇಲ್ತುಂಬ್ಡೆ ಅವರು ತನ್ನ ಅರ್ಜಿಯಲ್ಲಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಲು ನೆದರ್‌ಲ್ಯಾಂಡ್ ಹಾಗೂ ಬ್ರಿಟನ್ ಆಹ್ವಾನ ನೀಡಿದೆ ಎಂದು ಹೇಳಿದ್ದಾರೆ.
ಎನ್‌ಐಎ ಕಳೆದ ವಾರ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡಾವಿಟ್‌ನಲ್ಲಿ ಈ ಅರ್ಜಿಗೆ ವಿರೋಧ ವ್ಯಕ್ತಪಡಿಸಿದೆ. ಈ ಪ್ರಕರಣದ ಆರೋಪಿಯಾಗಿರುವ ತೇಲ್ತುಂಬ್ಡೆ ಹಾಗೂ ಇತರರು ಮಾವೋವಾದ ಹಾಗೂ ನಕ್ಸಲ್‌ವಾದವನ್ನು ಹರಡುತ್ತಿರುವ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ಅದು ಹೇಳಿದೆ.