ಮಣಿಪುರ: ನಿಷೇಧಿತ ಯುಎನ್ಎಲ್ಎಫ್ ನ ಇಬ್ಬರು ಶಂಕಿತ ಉಗ್ರರ ಬಂಧನ
ಇಂಫಾಲ: ನಿಷೇಧಿತ ಯುಎನ್ಎಲ್ಎಫ್ಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಇಂಫಾಲ ಪೂರ್ವ ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಿಂದ ಮಣಿಪುರ ಪೊಲೀಸರು ಬಂಧಿಸಿದ್ದಾರೆ.
ಅವರ ವಶದಲ್ಲಿದ್ದ ಶಸ್ತ್ರಾಸ್ತ್ರಗಳು ಹಾಗೂ 22,19,000 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸುಲಿಗೆ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಯುಎನ್ಎಲ್ಎಫ್ನ ಓರ್ವ ಶಂಕಿತ ಉಗ್ರನನ್ನು ಇಂಫಾಲ ಪೂರ್ವ ಜಿಲ್ಲೆಯ ವಾಂಗ್ಖೈ ಪ್ರದೇಶದಿಂದ ರವಿವಾರ ಬಂಧಿಸಲಾಗಿದೆ. ಆತನಲ್ಲಿದ್ದ ಒಂದು ಬೆರ್ರೆಟಾ ಪಿಸ್ತೂಲ್ ಹಾಗೂ 15 ಸಜೀವ ಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆತನ ಅಡಗುದಾಣದ ಮೇಲೆ ನಡೆಸಿದ ದಾಳಿಯಲ್ಲಿ ಪೊಲೀಸರು ಒಂದು ಎಸ್ಎಂಜಿ ಕಾರ್ಬೈನ್ ಗನ್, ಒಂದು 9 ಎಂಎಂ ಪಿಸ್ತೂಲ್, ನಾಲ್ಕು ಮ್ಯಾಗಝಿನ್, ಒಂದು ಹ್ಯಾಂಡ್ ಗ್ರೆನೇಡ್, 66 ಸ್ನೈಪರ್ ಲೈವ್ ರೌಂಡ್ ಹಾಗೂ 69,000 ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎನ್ಎಲ್ಎಫ್ (ಪಂಬೈ)ನ ಇನ್ನೋರ್ವ ಶಂಕಿತ ಉಗ್ರನ್ನು ಇಂಫಾಲ ಪೂರ್ವ ಜಿಲ್ಲೆಯ ಖುಂದ್ರಕ್ಪಾಮ್ ಅವಾಂಗ್ ಲೈಕೈ ಪ್ರದೇಶದಿಂದ ಬಂಧಿಸಲಾಗಿದೆ. ಈತ ಇಂಫಾಲ ಸುತ್ತಮುತ್ತ ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈತನ ವಶದಲ್ಲಿದ್ದ 21,50,000 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.