ಸೋದರಳಿಯ ಆಕಾಶ್ ಕ್ಷಮಾಪಣೆಯನ್ನು ಸ್ವೀಕರಿಸಿದ ಮಾಯಾವತಿ ಆದರೆ, ಅವರ ಮಾವನಿಗೆ ಕ್ಷಮೆಯಿಲ್ಲ

Update: 2025-04-14 23:29 IST
ಸೋದರಳಿಯ ಆಕಾಶ್ ಕ್ಷಮಾಪಣೆಯನ್ನು ಸ್ವೀಕರಿಸಿದ ಮಾಯಾವತಿ ಆದರೆ, ಅವರ ಮಾವನಿಗೆ ಕ್ಷಮೆಯಿಲ್ಲ

File Photo

  • whatsapp icon

ಲಕ್ನೋ, ಎ. 14: ತನ್ನ ಸೋದರಳಿಯ ಆಕಾಶ್ ಆನಂದ್ ಸಾರ್ವಜನಿಕವಾಗಿ ಕ್ಷಮೆ ಕೋರಿದ ಬಳಿಕ ಕೆಲವೇ ಗಂಟೆಗಳಲ್ಲಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಮುಖ್ಯಸ್ಥೆ ಮಾಯಾವತಿ ಅದನ್ನು ಸ್ವೀಕರಿಸಿದ್ದಾರೆ ಮತ್ತು ಅವರಿಗೆ ‘‘ಇನ್ನೊಂದು ಅವಕಾಶ’’ವನ್ನು ನೀಡಲು ನಿರ್ಧರಿಸಿದ್ದಾರೆ.

ಆದರೆ, ಅವರನ್ನು ಪಕ್ಷಕ್ಕೆ ಮರಳಿ ಕರೆಸುವ ಮುನ್ನ ಮಾಯಾವತಿ ಹಲವು ಶರತ್ತುಗಳನ್ನು ವಿಧಿಸಿದ್ದಾರೆ. ಆಕಾಶ್ ತನ್ನ ಹಿರಿಯರನ್ನು ಗೌರವಿಸಬೇಕು ಮತ್ತು ತನ್ನ ಮಾವನ ಸಲಹೆಗಳನ್ನು ಕೇಳಬಾರದು- ಎನ್ನುವುದು ಈ ಶರತ್ತುಗಳ ಪೈಕಿ ಕೆಲವು. ಅದೇ ವೇಳೆ, ತನ್ನ ಉತ್ತರಾಧಿಕಾರಿಯನ್ನು ನೇಮಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆ, ಮಾಯಾವತಿ ತನ್ನ ಸೋದರಳಿಯನನ್ನು ರಾಷ್ಟ್ರೀಯ ಸಮನ್ವಯಕಾರ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದರು. ಅಷ್ಟೇ ಅಲ್ಲದೆ, ಆಕಾಶ್ ತನ್ನ ಉತ್ತರಾಧಿಕಾರಿ ಎಂಬ ಯಾವುದೇ ಇಂಗಿತವನ್ನು ತೊಡೆದುಹಾಕಿದ್ದರು.

ಆಕಾಶ್ ತನ್ನ ಮಾವ ಹಾಗೂ ಮಾಜಿ ಬಿಎಸ್‌ಪಿ ಸಂಸದ ಅಶೋಕ್ ಸಿದ್ಧಾರ್ಥರ ಸೂಚನೆಯಂತೆ ನಡೆದುಕೊಳ್ಳುತ್ತಿರುವುದು ಮಾಯಾವತಿಯ ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ.

ರವಿವಾರ ಆಕಾಶ್, ಮಾಯಾವತಿಯಿಂದ ಕ್ಷಮೆ ಕೋರಿದ್ದಾರೆ ಹಾಗೂ ಮಾಯಾವತಿಯ ಕೋಪಕ್ಕೆ ಕಾರಣವಾಗಿದೆ ಎನ್ನಲಾದ ಅಂಶವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.

‘‘ಇನ್ನು ನನ್ನ ರಾಜಕೀಯ ನಿರ್ಧಾರಗಳಿಗೆ ನಾವು ಯಾವುದೇ ಸಂಬಂಧಿ ಅಥವಾ ಸಲಹೆಗಾರರಿಂದ ಯವುದೇ ಸಲಹೆ ಪಡೆಯುವುದಿಲ್ಲ. ಗೌರವಾನ್ವಿತ ಬೆಹೆನ್-ಜಿ ನೀಡುವ ನಿರ್ದೇಶನಗಳನ್ನು ಮಾತ್ರ ಅನುಸರಿಸುತ್ತೇನೆ. ಪಕ್ಷದಲ್ಲಿರುವ ನನ್ನ ಹಿರಿಯರನ್ನು ಗೌರವಿಸುತ್ತೇನೆ ಮತ್ತು ಅವರ ಅನುಭವದಿಂದ ತುಂಬಾ ವಿಷಯಗಳನ್ನು ಕಲಿಯುತ್ತೇನೆ’’ ಎಂಬುದಾಗಿ ಆಕಾಶ್ ರವಿವಾರ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಆದರೆ, ಅಶೋಕ್ ಸಿದ್ಧಾರ್ಥ್‌ಗೆ ಯಾವುದೇ ವಿನಾಯಿತಿ ಇಲ್ಲ ಎಂಬುದಾಗಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಸಿದ್ಧಾರ್ಥರನ್ನು ಫೆಬ್ರವರಿಯಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ‘‘ಆದರೆ, ಆಕಾಶ್‌ರ ಮಾವ (ಹೆಂಡತಿಯ ತಂದೆ) ಅಶೋಕ್ ಸಿದ್ಧಾರ್ಥರ ತಪ್ಪುಗಳು ಅಕ್ಷಮ್ಯ. ಗುಂಪುಗಾರಿಕೆ ಮುಂತಾದ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಮಾತ್ರವಲ್ಲದೆ, ಆಕಾಶ್‌ರ ರಾಜಕೀಯ ಜೀವನವನ್ನು ನಾಶಗೈಯಲು ಅವರು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಹಾಗಾಗಿ, ಅವರನ್ನು ಕ್ಷಮಿಸಿ ಪಕ್ಷಕ್ಕೆ ಮರಳಿ ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂದು ಮಾಯಾವತಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News