8 ಲಕ್ಷ ಮಹಿಳೆಯರ ಸ್ಟೈಪೆಂಡ್‍ಗೆ ಮಹಾರಾಷ್ಟ್ರ ಸರ್ಕಾರ ಕತ್ತರಿ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (PTI)
ಮುಂಬೈ : ಮಹಾಯುತಿ ಸರ್ಕಾರದ ಪ್ರಮುಖ ಯೋಜನೆಯಾದ ಮುಖ್ಯಮಂತ್ರಿ ಮಾಜ್ಹಿ ಲಡ್ಕಿ ಬಹಿನ್ ಯೋಜನೆಯ ಎಂಟು ಲಕ್ಷ ಫಲಾನುಭವಿಗಳು ನಮೋ ಶೇಟ್ಕರಿ ಮಹಾಸನ್ಮಾನ್ ನಿಧಿ (ಎನ್‍ಎಸ್‍ಎಂಎನ್) ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ ಎಂಬ ಕಾರಣ ನೀಡಿ ಅವರ ಸ್ಟೈಪೆಂಡ್‍ಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದೆ.
ಎಂಟು ಲಕ್ಷ ಮಹಿಳೆಯರು ಮಾಸಿಕವಾಗಿ ಪಡೆಯುತ್ತಿದ್ದ 1,500 ರೂಪಾಯಿಗಳ ಬದಲು ಇನ್ನು ಮುಂದೆ ಕೇವಲ 500 ರೂಪಾಯಿ ಪಡೆಯಲಿದ್ದಾರೆ. ಈ ಫಲಾನುಭವಿಗಳು ಈಗಾಗಲೇ ಎನ್‍ಎಸ್‍ಎಂಎನ್ ಯೋಜನೆಯಡಿ ಮಾಸಿಕ 1,000 ರೂಪಾಯಿ ಪಡೆಯುತ್ತಿದ್ದಾರೆ ಎಂದು ಪ್ರಕಟಣೆ ಹೇಳಿದೆ. ಲಡ್ಕಿ ಬಹಿನ್ ಯೋಜನೆಯಡಿ ಫಲಾನುಭವಿಗಳು ಇತರ ಸರ್ಕಾರಿ ಸೌಲಭ್ಯವನ್ನು ಪಡೆಯುವ ಅರ್ಹತೆ ಹೊಂದಿದ್ದು, ಗರಿಷ್ಠ ಮಾಸಿಕ 1,500 ರೂಪಾಯಿ ಪಡೆಯಬಹುದಾಗಿದೆ.
ಈ ಯೋಜನೆಯಡಿ ಸೌಲಭ್ಯ ಪಡೆಯುವ ಮಾನದಂಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕ್ರಮವಾಗಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಕಳೆದ ಅಕ್ಟೋಬರ್ ನಲ್ಲಿ 2.63 ಕೋಟಿ ಮಂದಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರು. ಇದರ ಪರಿಶೀಲನೆ ನಡೆಸಿ 11 ಲಕ್ಷ ಮಂದಿಯನ್ನು ಕಿತ್ತುಹಾಕಿ 2.52 ಕೋಟಿ ಮಂದಿಗೆ ಫೆಬ್ರವರಿ ವೇಳೆ ಸ್ಟೈಪಂಡ್ ನೀಡಲಾಗುತ್ತಿತ್ತು. ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಫಲಾನುಭವಿಗಳ ಸಂಖ್ಯೆ 2.46 ಲಕ್ಷಕ್ಕೆ ಇಳಿದಿದೆ.
ಪರಿಶೀಲನೆ ಪ್ರಕ್ರಿಯೆ ಬಳಿಕ 10-15 ಲಕ್ಷ ಫಲಾನುಭವಿಗಳು ಕಡಿಮೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದರು. ನೆರವು ಪಡೆಯಲು ಮಾನದಂಡವನ್ನು ಬದಲಿಸಿಲ್ಲ. ಆದರೆ ಅರ್ಹರು ಮಾತ್ರ ಪಡೆಯುವಂತೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.