ಸಂವಿಧಾನ ಸದನದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಆಡಳಿತಾರೂಢ, ವಿಪಕ್ಷಗಳ ನಾಯಕರು

Update: 2025-04-14 22:36 IST
ಸಂವಿಧಾನ ಸದನದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಆಡಳಿತಾರೂಢ, ವಿಪಕ್ಷಗಳ ನಾಯಕರು

Photo - PTI

  • whatsapp icon

ಹೊಸದಿಲ್ಲಿ: ಸೋಮವಾರ ಸಂಸತ್ ಭವನದ ಸಂವಿಧಾನ ಸದನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯಂದು ಆಡಳಿತಾರೂಢ ಹಾಗೂ ವಿಪಕ್ಷಗಳ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು.

ಸಂವಿಧಾನ ಸದನ(ಹಳೆಯ ಸಂಸತ್ ಭವನ)ದ ಆವರಣದಲ್ಲಿನ ‘ಪ್ರೇರಣಾ ಸ್ಥಳ’ದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ರಾಜಕೀಯ ಮುಖಂಡರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಒಟ್ಟಾಗಿ ಪಾಲ್ಗೊಂಡಿದ್ದರು.

ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಗೌರವ ನಮನ ಸಲ್ಲಿಸಿದರು.

ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸುವ ವೇಳೆ ಆಡಳಿತಾರೂಢ ಪಕ್ಷ ಹಾಗೂ ವಿಪಕ್ಷಗಳ ನಾಯಕರು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಪರಸ್ಪರ ಸೌಹಾರ್ದಯುತ ಸಂವಾದದಲ್ಲಿ ತೊಡಗಿರುವುದು ಈ ವೇಳೆ ಕಂಡು ಬಂದಿತು.

ಅಪರೂಪದ ಸೌಹಾರ್ದತೆಯನ್ನು ಪ್ರದರ್ಶಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸೋನಿಯಾ ಗಾಂಧಿಯೊಂದಿಗೆ ಸ್ನೇಹಯುತ ಮಾತುಕತೆಯಲ್ಲಿ ತೊಡಗಿದರು. ಮತ್ತೊಂದೆಡೆ, ಕಾನೂನು ಸಚಿವ ಅರ್ಜುನ್ ಮೇಘವಾಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸುತ್ತಿರುವುದು ಕಂಡು ಬಂದಿದೆ.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಅಂಗವಾಗಿ ದೇಶದ ಜನರಿಗೆ ಸಂದೇಶ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾನ ಸಮಾಜದ ಬಲವಾದ ಪ್ರತಿಪಾದಕರಾಗಿದ್ದರು. ಮಹಿಳೆಯರು ಹಾಗೂ ಶೋಷಿತ ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳಿಗಾಗಿ ಅವರು ತಮ್ಮ ಜೀವನಪರ್ಯಂತ ಹೋರಾಟ ನಡೆಸಿದರು ಎಂದು ಶ್ಲಾಘಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News