ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಪಿಐ

ಸುಪ್ರೀಂ ಕೋರ್ಟ್ - ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಿಪಿಐ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದೆ. ಸಿಪಿಐ ತನ್ನ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರ ಮೂಲಕ ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದೆ.
ಜನರ ವಿರೋಧದ ಹೊರತಾಗಿಯೂ ಜಂಟಿ ಸಂಸದೀಯ ಸಮಿತಿ (ಮಸೂದೆ ಪರಿಶೀಲಿಸಲು ರೂಪಿಸಲಾದ ಸಮಿತಿ) ಸದಸ್ಯರು ಹಾಗೂ ಇತರ ಸಂಬಂಧಿತರ ಆಕ್ಷೇಪವನ್ನು ಸೂಕ್ತವಾಗಿ ಪರಿಗಣಿಸದೆ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸರಕಾರ ಅಂಗೀಕರಿಸಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯವಾದಿ ರಾಮ್ ಶಂಕರ್ ಅವರ ಮೂಲಕ ಸಲ್ಲಿಸಲಾದ ಅರ್ಜಿ ರಾಷ್ಟ್ರಪತಿ ಅವರ ಅಂಕಿತದ ಹಿನ್ನೆಲೆಯಲ್ಲಿ ಎಪ್ರಿಲ್ 5ರಂದು ಪ್ರಕಟವಾದ ವಕ್ಫ್ ತಿದ್ದುಪಡಿ ಕಾಯ್ದೆ ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ಗಣನೀಯವಾಗಿ ಮೊಟಕುಗೊಳಿಸಿದೆ. ಅಲ್ಲದೆ, ವಕ್ಫ್ ಕಾಯ್ದೆಯ ವಿನ್ಯಾಸವನ್ನು ಮೂಲಭೂತವಾಗಿ ರೂಪಾಂತರಗೊಳಿಸಿದೆ ಎಂದಿದೆ.
ಈ ಹಿಂದೆ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಹಲವು ನೆಲೆಗಳಲ್ಲಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಇತ್ತೀಚೆಗೆ ಈ ಕಾಯ್ದೆ ಪ್ರಶ್ನಿಸಿ ನಟ-ರಾಜಕಾರಣಿ ಹಾಗೂ ಟಿವಿಕೆಯ ಅಧ್ಯಕ್ಷ ವಿಜಯ್ ಕೂಡ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.