ಉತ್ತರ ಪ್ರದೇಶ| ದಲಿತ ಸಮುದಾಯದ ರೈತನ ಹತ್ಯೆ, ಮೃತದೇಹ ದಹನ; ಪ್ರಬಲ ಜಾತಿಗೆ ಸೇರಿದ 7 ಮಂದಿಯ ವಿರುದ್ಧ ಎಫ್‌ಐಆರ್
Photo : PTI
ಪ್ರಯಾಗ್ರಾಜ್: ದಲಿತ ಸಮುದಾಯಕ್ಕೆ ಸೇರಿದ ರೈತರೋರ್ವರನ್ನು ಹತ್ಯೆಗೈದ ಹಾಗೂ ಅವರ ಮೃತದೇಹವನ್ನು ದಹನಗೈದ ಘಟನೆ ಪ್ರಯಾಗ್ರಾಜ್ ಜಿಲ್ಲೆಯ ಗ್ರಾಮವೊಂದರಲ್ಲಿ ಶನಿವಾರ ನಡೆದಿದೆ.
ಈ ಘಟನೆಗೆ ಸಂಬಂಧಿಸಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಲಿತ ರೈತ ದೇವಿ ಶಂಕರ್ ಅವರ ಅರೆ ಸುಟ್ಟ ಮೃತದೇಹ ಪ್ರಯಾಗ್ರಾಜ್ನ ಕರಛನ ತಹಶೀಲ್ ನ ಇಸೋಟಾ ಲೋಹಾಗ್ಪುರ ಗ್ರಾಮದ ಹಣ್ಣಿನ ತೋಟವೊಂದರಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿತ್ತು.
ದೇವಿ ಶಂಕರ್ ಅವರ ತಂದೆ ಅಶೋಕ್ ಕುಮಾರ್ ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಬಲ ಜಾತಿಗೆ ಸೇರಿದ 7 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿಚಾರಣೆಗಾಗಿ 6 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಿ ಶಂಕರ್ (35) ಮನೆಗೆ ಆರೋಪಿಗಳಲ್ಲಿ ಓರ್ವನಾದ ದಿಲೀಪ್ ಸಿಂಗ್ ಆಗಮಿಸಿದ್ದ. ಹೊಲಗಳಲ್ಲಿ ಹೊರೆ ಕೊಂಡೊಯ್ಯಲು ನೆರವು ನೀಡಲು ಶಂಕರ್ ನನ್ನು ಕರೆದುಕೊಂಡು ಹೋಗಿದ್ದ. ಇದು ಶಂಕರ್ ಕೊನೆಯ ಬಾರಿಗೆ ಕಾಣಿಸಿಕೊಂಡಿರುವುದು ಎಂದು ಅವರು ತಿಳಿಸಿದ್ದಾರೆ.
ದಿಲೀಪ್ ಸಿಂಗ್ ತನ್ನ ಪುತ್ರ ದೇವಿ ಶಂಕರ್ ನನ್ನು ರಾತ್ರಿ ಸುಮಾರು 10.30ಕ್ಕೆ ಕರೆದೊಯ್ದಿದ್ದಾನೆ. ತನ್ನ ಪುತ್ರನ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ಮಾಹಿತಿ ಶನಿವಾರ ಮುಂಜಾನೆ ಸುಮಾರು 5.30ಕ್ಕೆ ಸಿಕ್ಕಿತು ಎಂದು ಅವರು ತಿಳಿಸಿದ್ದಾರೆ.
ಅನಂತರ ಆರೋಪಿಗಳು ತನ್ನ ಮನೆಗೆ ಬಂದರು ಹಾಗೂ ಜಾತಿ ನಿಂದನೆ ಮಾಡಿದರು. ತನ್ನ ಕುಟುಂಬಕ್ಕೆ ಬೆದರಿಕೆ ಒಡ್ಡಿದರು ಎಂದು ಅಶೋಕ್ ಕುಮಾರ್ ಆರೋಪಿಸಿದ್ದಾರೆ.