ಅಂಬೇಡ್ಕರ್ ಪರಂಪರೆ ಬಗ್ಗೆ ಮೋದಿ ಸರಕಾರದಿಂದ ಕೇವಲ ‘ಬಾಯುಪಚಾರ’ದ ಮಾತು: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Update: 2025-04-14 23:26 IST
ಅಂಬೇಡ್ಕರ್ ಪರಂಪರೆ ಬಗ್ಗೆ ಮೋದಿ ಸರಕಾರದಿಂದ ಕೇವಲ ‘ಬಾಯುಪಚಾರ’ದ ಮಾತು: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ | PC : PTI

  • whatsapp icon

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರ ಪರಂಪರೆ ಬಗ್ಗೆ ಕೇವಲ ‘ಬಾಯುಪಚಾರ’ದ ಮಾತುಗಳನ್ನು ಆಡುತ್ತಿದೆಯೇ ಹೊರತು, ಅವರ ಆಶಯಗಳನ್ನು ಈಡೇರಿಸಲು ಏನೂ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್‌ರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಆರ್‌ಎಸ್‌ಎಸ್ ಸಂವಿಧಾನಶಿಲ್ಪಿಯ ‘‘ಶತ್ರು’’ಗಳಾಗಿದ್ದರು ಎಂದು ಹೇಳಿದರು.

ಅಂಬೇಡ್ಕರ್‌ರನ್ನು ಕಾಂಗ್ರೆಸ್ ನಡೆಸಿಕೊಂಡಿರುವ ರೀತಿಯನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಂಬೇಡ್ಕರ್ ಬರೆದಿರುವ ಪತ್ರವೊಂದನ್ನು ಉಲ್ಲೇಖಿಸಿದರು. ಆ ಪತ್ರದಲ್ಲಿ, 1952ರ ತನ್ನ ಚುನಾವಣಾ ಸೋಲಿಗೆ ಎಸ್.ಎ. ಡಾಂಗೆ ಮತ್ತು ವಿ.ಡಿ. ಸಾವರ್ಕರ್ ಕಾರಣ ಎಂಬುದಾಗಿ ಅಂಬೇಡ್ಕರ್ ದೂರಿದ್ದರು.

ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವ ಹಾಗೂ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿ (ಒಬಿಸಿ)ಗಳಿಗೆ ಮೀಸಲಾತಿ ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಸಂವಿಧಾನವು ಭಾರತೀಯ ನಾಗರಿಕರಿಗೆ ಅಂಬೇಡ್ಕರ್ ನೀಡಿರುವ ಬಹುಮಾನವಾಗಿದೆ ಎಂದು ಹೇಳಿದ ಅವರು, ಅದು ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಹಕ್ಕನ್ನು ನೀಡುತ್ತದೆ ಎಂದರು.

‘‘ಎಐಸಿಸಿ ಅಧಿವೇಶನದಲ್ಲಿ ನಾವು ಸಾಮಾಜಿಕ ನ್ಯಾಯದ ಕಲ್ಪನೆಗಳನ್ನು ಮುನ್ನೆಲೆಗೆ ತಂದಿದ್ದೇವೆ’’ ಎಂದು ಅವರು ತಿಳಿಸಿದರು. ರಾಷ್ಟ್ರವ್ಯಾಪಿ ಜಾತಿಗಣತಿಯು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

‘‘ಕೇಂದ್ರ ಸರಕಾರವು 2011ರ ಜನಗಣತಿಯ ಆಧಾರದಲ್ಲಿ ನೀತಿಗಳನ್ನು ರೂಪಿಸುತ್ತಿದೆ. 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿ ಬಗ್ಗೆ ಏನೂ ತಿಳಿದಿಲ್ಲ. ಸಾಮಾನ್ಯ ಜನಗಣತಿಯ ಜೊತೆಗೆ, ಜಾತಿಗಣತಿಯನ್ನೂ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಇದರಿಂದ ಯಾವ ಸಮುದಾಯವು ಎಷ್ಟು ಅಭಿವೃದ್ಧಿಹೊಂದಿದೆ ಎನ್ನುವುದು ತಿಳಿಯುತ್ತದೆ’’ ಎಂದು ಅವರು ಹೇಳಿದರು.

ಅಂಬೇಡ್ಕರ್ ಪ್ರೇರಣೆಯಿಂದಾಗಿ ಸಾಮಾಜಿಕ ನ್ಯಾಯಕ್ಕೆ ದೇಶ ಬದ್ಧ: ಮೋದಿ

ಡಾ. ಭೀಮ್ ರಾವ್ ಅಂಬೇಡ್ಕರ್ ನೀಡಿದ ಪ್ರೇರಣೆಯಿಂದಾಗಿ, ಸಾಮಾಜಿಕ ನ್ಯಾಯದ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ದೇಶಕ್ಕೆ ಇಂದು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಮೋದಿ, ಅಂಬೇಡ್ಕರ್‌ರ ತತ್ವಗಳು ಮತ್ತು ಕಲ್ಪನೆಗಳು ಆತ್ಮನಿರ್ಭರ (ಸ್ವಾವಲಂಬಿ) ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣವನ್ನು ತ್ವರಿತಗೊಳಿಸುತ್ತವೆ ಎಂದು ಹೇಳಿದರು.

ಬಳಿಕ ಅವರು, ಸಂಸತ್‌ನಲ್ಲಿ ಇತರ ಗಣ್ಯರೊಂದಿಗೆ ಸೇರಿ ಅಂಬೇಡ್ಕರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News