199 ದೇಶಗಳ ಪೈಕಿ 148ಕ್ಕೆ ಕುಸಿದ ಭಾರತದ ಪಾಸ್‌ಪೋರ್ಟ್ ಶ್ರೇಯಾಂಕ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಗುರುವಾರ ಬಿಡುಗಡೆಗೊಂಡ ನೋಮಾಡ್ ಕ್ಯಾಪಿಟಲಿಸ್ಟ್ ಪಾಸ್‌ಪೋರ್ಟ್ ಸೂಚ್ಯಂಕ 2025ರ ಪ್ರಕಾರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಭಾರತವು 199 ದೇಶಗಳಲ್ಲಿ ಹಿಂದಿನ ವರ್ಷದ 147ನೇ ಸ್ಥಾನದಿಂದ 148ನೇ ಸ್ಥಾನಕ್ಕೆ ಕುಸಿದಿದೆ.
ತೆರಿಗೆ ಮತ್ತು ವಲಸೆ ಸಲಹಾ ಸಂಸ್ಥೆ ನೋಮಾಡ್ ಕ್ಯಾಪಿಟಲಿಸ್ಟ್ ಪ್ರತಿ ವರ್ಷ ಪ್ರಕಟಿಸುವ ಸೂಚ್ಯಂಕವು ವೀಸಾ-ಮುಕ್ತ ಪ್ರಯಾಣ, ತೆರಿಗೆ, ಜಾಗತಿಕ ದೃಷ್ಟಿಕೋನ, ದ್ವಿಪೌರತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯಈ ಐದು ಮಾನದಂಡಗಳ ಆಧಾರದಲ್ಲಿ ಪ್ರತಿ ದೇಶದ ಪಾಸ್‌ಪೋರ್ಟ್‌ಗೆ ಶ್ರೇಯಾಂಕವನ್ನು ನಿರ್ಧರಿಸುತ್ತದೆ.
ಭಾರತವು ಒಟ್ಟು 47.5 ಅಂಕಗಳೊಂದಿಗೆ ಪೂರ್ವ ಆಫ್ರಿಕಾದ ಕೊಮೊರಸ್‌ನೊಂದಿಗೆ 148ನೇ ಸ್ಥಾನವನ್ನು ಹಂಚಿಕೊಂಡಿದೆ. ಕಳೆದ ವರ್ಷ ಅದು ಮೊಝಾಂಬಿಕ್ ಜೊತೆಗೆ 147ನೇ ಸ್ಥಾನವನ್ನು ಹಂಚಿಕೊಂಡಿತ್ತು.
ಐರಿಷ್ ನಾಗರಿಕರು ಐರೋಪ್ಯ ಒಕ್ಕೂಟದಾದ್ಯಂತ ಮತ್ತು ವಿಶೇಷವಾಗಿ ಬ್ರಿಟನ್‌ನಲ್ಲಿ ಮುಕ್ತವಾಗಿ ವಾಸವಾಗಿರುವ ಮತ್ತು ಕೆಲಸ ಮಾಡುವ ಹಕ್ಕು ಹೊಂದಿರುವುದರಿಂದ ಐರ್ಲೆಂಡ್ 2025ನೇ ಸಾಲಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಶ್ರೇಯಾಂಕಕ್ಕೆ ಭಾಜನವಾಗಿದೆ.
ಸ್ವಿಟ್ಝರ್‌ಲ್ಯಾಂಡ್,ಗ್ರೀಸ್,ಪೋರ್ಚುಗಲ್,ಮಾಲ್ಟಾ,ಇಟಲಿ, ಲಕ್ಸೆಂಬರ್ಗ್, ಫಿನ್ಲಂಡ್, ನಾರ್ವೆ, ಯುಎಇ, ನ್ಯೂಝಿಲ್ಯಾಂಡ್ ಮತ್ತು ಐಸ್‌ಲ್ಯಾಂಡ್ ಐರ್ಲೆಂಡ್ ನಂತರದ ಸ್ಥಾನಗಳಲ್ಲಿವೆ. ಅಮೆರಿಕವು ಯುರೋಪಿನ ಸ್ಯಾನ್ ಮರಿನೊ ಜೊತೆಗೆ ಪಟ್ಟಿಯಲ್ಲಿ 45ನೇ ಸ್ಥಾನವನ್ನು ಹಂಚಿಕೊಂಡಿದೆ.
ಪಾಕಿಸ್ತಾನ, ಇರಾಕ್, ಎರಿಟ್ರಿಯಾ, ಯೆಮೆನ್ ಮತ್ತು ಅಫ್ಘಾನಿಸ್ತಾನ್ ಪಟ್ಟಿಯ ತಳಮಟ್ಟದಲ್ಲಿ 195ರಿಂದ 199ನೇ ಸ್ಥಾನಗಳಲ್ಲಿವೆ.
ಜನವರಿಯಲ್ಲಿ ಭಾರತದ ಪಾಸ್‌ಪೋರ್ಟ್ ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ದತ್ತಾಂಶಗಳ ಆಧಾರದಲ್ಲಿ ದೇಶಗಳ ಮೌಲ್ಯಮಾಪನ ನಡೆಸುವ ಹೆನ್ಲೆ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ 80 ರಿಂದ 85ನೇ ಸ್ಥಾನಕ್ಕೆ ಕುಸಿದಿತ್ತು.