ಪೂನಾವಾಲಾ, ದದಲಾನಿಗೆ ದಂಡ ವಿಧಿಸಿ ಹೈಕೋರ್ಟ್ ನೀಡಿದ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ತಹಸೀನ್ ಪೂನಾವಾಲಾ(X \ @tehseenp) , ಗಾಯಕ ವಿಶಾಲ್ ದದಲಾ (X \ @VishalDadlani)
ಹೊಸದಿಲ್ಲಿ: ರಾಜಕೀಯ ವಿಶ್ಲೇಷಕ ತಹಸೀನ್ ಪೂನಾವಾಲಾ ಹಾಗೂ ಗಾಯಕ ವಿಶಾಲ್ ದದಲಾನಿಗೆ ತಲಾ 10 ಲಕ್ಷ ರೂ. ದಂಡ ವಿಧಿಸಿ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
2016ರಲ್ಲಿ ಟ್ವಿಟ್ಟರ್‌ನಲ್ಲಿ ಜೈನ ಮುನಿ ತರುಣ ಸಾಗರ್ ಅವರನ್ನು ಅವಮಾನಿಸಿದ ಹಾಗೂ ಅಪಹಾಸ್ಯ ಮಾಡಿದ ಆರೋಪದಲ್ಲಿ ಉಚ್ಚ ನ್ಯಾಯಾಲಯ ಅವರಿಗೆ ದಂಡ ವಿಧಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ನ್ಯಾಯಾಲಯಗಳು ನೈತಿಕ ಪೊಲೀಸ್ ಗಿರಿಯನ್ನು ಮಾಡುವಂತಿಲ್ಲ ಎಂದು ಗಮನ ಸೆಳೆದಿದೆ.
‘ಇದು ಯಾವ ರೀತಿಯ ಆದೇಶ ? ನ್ಯಾಯಾಲಯ ನೈತಿಕ ಪೊಲೀಸ್ ಗಿರಿಯನ್ನು ಮಾಡುವಂತಿಲ್ಲ. ಇದು ನ್ಯಾಯಾಲಯದ ಕೆಲಸವೇ ಅಲ್ಲ’’ ಎಂದು ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯರ ಪೀಠ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಕೂಡಲೇ ಪೂನಾವಲ್ಲಾ, ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು ತನಗೆ ಸಂತಸ ಉಂಟು ಮಾಡಿದೆ ಎಂದಿದ್ದಾರೆ.
ಈ ಆದೇಶಕ್ಕೆ ತಾನು ಸುಪ್ರೀಂ ಕೋರ್ಟ್‌ಗೆ ಋಣಿಯಾಗಿದ್ದೇನೆ. ಪೊಲೀಸರಾಗಿರಲಿ, ಸರಕಾರವಾಗಿರಲಿ ಯಾರೊಬ್ಬರೂ ಯಾರ ಮೇಲೂ ನೈತಿಕ ಪೊಲೀಸ್ ಗಿರಿ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ 2019ರಲ್ಲಿ ನೀಡಿದ ತನ್ನ ಆದೇಶದಲ್ಲಿ ಪೂನಾವಾಲ ಹಾಗೂ ದದಲಾನಿ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತ್ತು. ಆದರೆ, ಜೈನ ಮುನಿ ತರುಣ್ ಸಾಗರ್ ಅವರನ್ನು ಅವಮಾನಿಸಿದ ಹಾಗೂ ಅಪಹಾಸ್ಯ ಮಾಡಿದ ಅಪರಾಧಕ್ಕೆ ಇಬ್ಬರಿಗೂ ತಲಾ 10 ಲಕ್ಷ ರೂ. ದಂಡ ವಿಧಿಸಿತ್ತು.