ವಕ್ಫ್ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ; ಕೇಂದ್ರ ಸರಕಾರದಿಂದ ಕೇವಿಯಟ್ ಸಲ್ಲಿಕೆ

ಸುಪ್ರೀಂ ಕೋರ್ಟ್ | PC : PTI
ಹೊಸದಲ್ಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಯಾವುದೇ ಆದೇಶ ನೀಡುವ ಮುನ್ನ ತಮ್ಮ ವಾದ ಆಲಿಸುವಂತೆ ಕೋರಿ ಕೇಂದ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ.
ನೂತನ ವಕ್ಫ್ (ತಿದ್ದುಪಡಿ) ಕಾಯ್ದೆ ಪ್ರಶ್ನಿಸಿ ರಾಜಕಾರಣಿಗಳು ಹಾಗೂ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ, ಜಮೀಯತ್ ಉಲೇಮಾ ಐ ಹಿಂದ್‌ನ ಅರ್ಜಿಗಳು ಸೇರಿದಂತೆ 10ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.
ಎಪ್ರಿಲ್ 15ರಂದು ಪೀಠದ ಮುಂದೆ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡುವ ಸಾಧ್ಯತೆ ಇದೆ. ಆದರೆ, ಇದು ಇದುವರೆಗೆ ಸುಪ್ರೀಂ ಕೋರ್ಟ್‌ನ ವೆಬ್ ಸೈಟ್‌ನಲ್ಲಿ ಕಂಡು ಬಂದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ನ್ಯಾಯವಾದಿಯೊಬ್ಬರು ತಿಳಿಸಿದ್ದಾರೆ.
ಅರ್ಜಿಗಳನ್ನು ಪಟ್ಟಿ ಮಾಡಲು ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಎಪ್ರಿಲ್ 7ರಂದು ಜಮೀಯತ್ ಉಲೇಮಾ ಐ ಹಿಂದ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರಿಗೆ ಭರವಸೆ ನೀಡಿತ್ತು.