ಮಣಿಪುರದಲ್ಲಿ ವಕ್ಫ್ ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ

PC : ANI
ಇಂಫಾಲ: ಮಣಿಪುರದ ಥೌಬಾಲ್ ಜಿಲ್ಲೆಯ ಮುಸ್ಲಿಮ್ ಪ್ರಾಬಲ್ಯದ ಪ್ರದೇಶವಾಗಿರುವ ಲಿಲಾಂಗ್ ನಲ್ಲಿ ವಕ್ಫ್ ಕಾಯ್ದೆಯನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಲಿಲಾಂಗ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಇಂಫಾಲ ಪೂರ್ವ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆಯನ್ನು ಏರ್ಪಡಿಸಲಾಗಿದೆ.
ರವಿವಾರ ರಾತ್ರಿ ದೊಣ್ಣೆಗಳು ಮತ್ತು ಕಲ್ಲುಗಳೊಂದಿಗೆ ಸಜ್ಜಿತರಾಗಿದ್ದ ಸುಮಾರು ಏಳೆಂಟು ಸಾವಿರ ಜನರಿದ್ದ ಗುಂಪು ಲಿಲಾಂಗ್‌ನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಣಿಪುರ ಘಟಕದ ಅಧ್ಯಕ್ಷ ಮುಹಮ್ಮದ್ ಅಸ್ಕರ್ ಅಲಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿತ್ತು.
ಅಲಿ ರವಿವಾರ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದರು. ಇದು ಜನರನ್ನು ರೊಚ್ಚಿಗೆಬ್ಬಿಸಿತ್ತು ಎನ್ನಲಾಗಿದೆ. ಘಟನೆಯ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಮೊದಲಿನ ಹೇಳಿಕೆಗಾಗಿ ಕ್ಷಮೆಯನ್ನು ಯಾಚಿಸಿರುವ ಅಲಿ, ವಕ್ಫ್ ಕಾಯ್ದೆಯನ್ನು ಖಂಡಿಸಿದ್ದಾರೆ.
ರವಿವಾರ ಇಂಫಾಲ ಕಣಿವೆಯ ವಿವಿಧೆಡೆಗಳಲ್ಲೂ ವಕ್ಫ್ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.
ಈ ನಡುವೆ ಮಣಿಪುರದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಶಾಸಕ ಶೇಖ್ ನೂರುಲ್ ಹಸನ್ ಅವರು, ವಕ್ಫ್ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ಹಕ್ಕುಗಳನ್ನು ಉಲ್ಲಂಘಿಸಿದೆ. ತಾನು ಅದನ್ನು ಖಂಡಿಸುತ್ತೇನೆ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸುತ್ತೇನೆ ಎಂದು ಹೇಳಿದ್ದಾರೆ.