ಮಾಜಿ ಕ್ರಿಕೆಟಿಗ ಕೇದಾರ್ ಜಾಧವ್ ಬಿಜೆಪಿಗೆ ಸೇರ್ಪಡೆ

ಕೇದಾರ್ ಜಾಧವ್ | PC : PTI
ಮುಂಬೈ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಹಾಗೂ ಮಾಜಿ ಸಚಿವ ಮತ್ತು ಬಿಜೆಪಿಯ ರಾಜ್ಯ ಕಾರ್ಯಾಧ್ಯಕ ರವೀಂದ್ರ ಜೈನ್ ಚವಾಣ್ ಸಮ್ಮುಖದಲ್ಲಿ ಮಂಗಳವಾರ ಮಾಜಿ ಭಾರತೀಯ ಕ್ರಿಕೆಟಿಗ ಕೇದಾರ್ ಜಾಧವ್ ಬಿಜೆಪಿಗೆ ಸೇರ್ಪಡೆಯಾದರು.
ಮಹಾರಾಷ್ಟ್ರದಲ್ಲಿ ಮಹಾಯುತಿ ಸರಕಾರದ ನೇತೃತ್ವ ವಹಿಸಿರುವ ಬಿಜೆಪಿಯನ್ನು ಸೇರ್ಪಡೆಯಾಗುವ ಮೂಲಕ, ಕೇದಾರ್ ಜಾಧವ್ ತಮ್ಮ ವೃತ್ತಿ ಜೀವನದ ಹೊಸ ಇನಿಂಗ್ಸ್ ಪ್ರಾರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ಚಂದ್ರಶೇಖರ್ ಬವಾಂಕುಲೆ, “ಮಾಜಿ ಕ್ರಿಕೆಟಿಗ ಕೇದಾರ್ ಜಾಧವ್ ಅವರನ್ನು ಪಕ್ಷದ ತೆಕ್ಕೆಗೆ ಸ್ವಾಗತಿಸುತ್ತಿರುವುದು ಅದ್ಭುತ ಕ್ಷಣವಾಗಿದೆ” ಎಂದು ಬಣ್ಣಿಸಿದರು.
ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ನಂತರ ಮಾತನಾಡಿದ ಕೇದಾರ್ ಜಾಧವ್, “ನಾನು ಛತ್ರಪತಿ ಶಿವಾಜಿಗೆ ವಂದಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ನಾಯಕತ್ವದಡಿ ಬಿಜೆಪಿಯು ಅಭಿವೃದ್ಧಿಯ ರಾಜಕಾರಣ ಮಾಡುತ್ತಿದೆ” ಎಂದು ಪ್ರಶಂಸಿದರು.
ಬಿಜೆಪಿಯು ರಾಜ್ಯದಲ್ಲಿ 1.5 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹಾಗೂ ಪಕ್ಷದೊಳಕ್ಕೆ ವಿವಿಧ ಪಕ್ಷಗಳು ಹಾಗೂ ವಲಯಗಳಿಂದ ನಾಯಕರು ಆಗಮಿಸುವ ನಿರೀಕ್ಷೆ ಹೊಂದಿರುವ ಹೊತ್ತಿನಲ್ಲೇ ಕೇದಾರ್ ಜಾಧವ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
2024ರಲ್ಲಿ ಕೇದಾರ್ ಜಾಧವ್ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.
39 ವರ್ಷದ ಕೇದಾರ್ ಜಾಧವ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಫೆಬ್ರವರಿ 2020ರಲ್ಲಿ ನ್ಯೂಝಿಲೆಂಡ್ ವಿರುದ್ಧ ಆಡಿದ್ದರು. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅವರು, ರಾಂಚಿಯಲ್ಲಿ ಶ್ರೀ ಲಂಕಾ ವಿರುದ್ಧ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದರು. 73 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು, 42.09 ರನ್ ಸರಾಸರಿಯಲ್ಲಿ ಒಟ್ಟು 1,389 ರನ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಏಕ ದಿನ ಪಂದ್ಯಗಳಲ್ಲಿ ತಾವು ಗಳಿಸಿರುವ ಒಟ್ಟು ಮೊತ್ತದಲ್ಲಿ ಅವರು ಎರಡು ಶತಕ ಹಾಗೂ ಆರು ಅರ್ಧ ಶತಕಗಳನ್ನು ಸಿಡಿಸಿದ್ದರು. ಅಲ್ಲದೆ, 27 ವಿಕೆಟ್ ಗಳನ್ನೂ ಕಿತ್ತು, ಗಮನ ಸೆಳೆದಿದ್ದರು. ಇದಲ್ಲದೆ, ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 123.23 ರನ್ ಸರಾಸರಿಯಲ್ಲಿ ಒಟ್ಟು 58 ರನ್ ಗಳನ್ನೂ ಅವರು ಗಳಿಸಿದ್ದರು.