ನಕಲಿ ಪನೀರ್ ಮಾರಾಟ: ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದ ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ , ಜೆ.ಪಿ.ನಡ್ಡಾ | PTI
ಹೊಸದಿಲ್ಲಿ: ದೇಶಾದ್ಯಂತ ಇರುವ ಫಾಸ್ಟ್ ಫುಡ್ ಮಳಿಗೆಗಳು, ರೆಸ್ಟೋರೆಂಟ್ ಗಳು ಹಾಗೂ ಇನ್ನಿತರ ಮಾರುಕಟ್ಟೆಗಳಲ್ಲಿ ಬಳಕೆ ಹಾಗೂ ಮಾರಾಟ ಮಾಡಲಾಗುತ್ತಿರುವ ನಕಲಿ ಹಾಗೂ ಕಲಬೆರಕೆ ಪನೀರ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ.
ಈ ಸಂಬಂಧ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವ ಪ್ರಹ್ಲಾದ್ ಜೋಶಿ, ದೇಶಾದ್ಯಂತ ನಕಲಿ ಹಾಗೂ ಕಲಬೆರಕೆ ಪನೀರ್ ನ ಬಳಕೆ ಮತ್ತು ಮಾರಾಟದಲ್ಲಿನ ಏರಿಕೆ ಪ್ರವೃತ್ತಿಯ ಕುರಿತು ಹಲವಾರು ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರ ಗಮನಕ್ಕೆ ತಂದಿದ್ದಾರೆ.
“ಇಂತಹ ನಕಲಿ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಸೇವನೆಯಿಂದ ಗಂಭೀರ ಹಾಗೂ ಅಪಾಯಕಾರಿ ಆರೋಗ್ಯ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇರುವುದರಿಂದ, ದೇಶಾದ್ಯಂತ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅವರು ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ನಕಲಿ ಹಾಗೂ ಕಲಬೆರಕೆ ಪನೀರ್ ಮಾರಾಟದ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಬಗ್ಗೆ ಕಳವಳ ಹೆಚ್ಚುತ್ತಿದೆ ಎಂದೂ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇಂತಹ ಘಟನೆಗಳಿಂದಾಗಿ ಸೇವಿಸುವ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಸಾರ್ವಜನಿಕರ ಗಾಬರಿ ಹಾಗೂ ದೂರುಗಳು ಹೆಚ್ಚಳಗೊಂಡಿದ್ದು, ವಿಶೇಷವಾಗಿ ಪ್ರಾಥಮಿಕ ಪೌಷ್ಟಿಕತೆಯ ಮೂಲವನ್ನಾಗಿ ಪನೀರ್ ಅನ್ನು ಅವಲಂಬಿಸಿರುವ ಗ್ರಾಹಕರಲ್ಲಿ ಕಳವಳಕ್ಕೆ ಕಾರಣವಾಗಿದೆ ಎಂದು ತಮ್ಮ ಪತ್ರದಲ್ಲಿ ಪ್ರಹ್ಲಾದ್ ಜೋಶಿ ಉಲ್ಲೇಖಿಸಿದ್ದಾರೆ.