ಉತ್ತರ ಪ್ರದೇಶ | ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ; ಬಿಜೆಪಿ ನಾಯಕ ಸಹಿತ 8 ಮಂದಿಯ ಬಂಧನ

Update: 2025-04-15 21:22 IST
ಉತ್ತರ ಪ್ರದೇಶ | ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ; ಬಿಜೆಪಿ ನಾಯಕ ಸಹಿತ 8 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಲಕ್ನೊ: ಪಶ್ಚಿಮ ಉತ್ತರಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಎಪ್ರಿಲ್ 10ರಂದು ನಡೆದ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್ ಸಹಿತ 8 ಮಂದಿಯನ್ನು ಬಂಧಿಸಲಾಗಿದೆ.

ಸಿಂಗ್ ಕಸ್ಗಂಜ್‌ ನ ಶಾಸಕರಾದ ದೇವೇಂದ್ರ ರಜಪೂತ್ ಹಾಗೂ ಹರಿಓಂ ವರ್ಮಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ. ಸಿಂಗ್ ಕಳೆದ 15 ವರ್ಷಗಳಿಂದ ಉತ್ತರಪ್ರದೇಶದ ಆಡಳಿತಾರೂಢ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾನೆ ಹಾಗೂ ಈತ ಬಿಜೆಪಿ ಶಾಸಕ ಹಾಗೂ ಕಸ್ಗಂಜ್‌ನ ಮಾಜಿ ಸಂಸದ ಕೂಡ ಆಗಿದ್ದ ರಾಜ್‌ ವೀರ್ ಸಿಂಗ್ ಆಲಿಯಾಸ್ ರಜ್ಜು ಭಯ್ಯಾ ಅವರೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಗಬ್ಬ್‌ರ್ ಎಂದು ಕುಖ್ಯಾತಿ ಗಳಿಸಿದ್ದ ಆರೋಪಿ ಅಖಿಲೇಶ್ ಪ್ರತಾಪ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆಯ ಪ್ರಕರಣ ಕೂಡ ದಾಖಲಾಗಿದೆ. ಬುಲಂದ್‌ಶಹರ್‌ನ ಮಾಜಿ ಶಾಸಕಿ ಅನಿತಾ ಲೋಧಿ ಅವರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಕೂಡ ಈತನ ಹೆಸರು ಕೇಳಿ ಬಂದಿತ್ತು. ಪ್ರಸಕ್ತ ಈತ ಪಕ್ಷದ ಯಾವುದೇ ಹುದ್ದೆಯನ್ನು ಹೊಂದಿಲ್ಲ.

ಕಸ್ಗಂಜ್ ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳಲ್ಲಿ ರವಿವಾರ ರಾತ್ರಿ ನಡೆಸಿದ ದಾಳಿಯ ಸಂದರ್ಭ ಜಿಲ್ಲಾ ಪೊಲೀಸರು ಇವರನ್ನು ಬಂಧಿಸಿದ್ದಾರೆ.

17 ವರ್ಷದ ಬಾಲಕಿಯನ್ನು ಆಕೆಯ ಗ್ರಾಮದಲ್ಲಿರುವ ಕಾಲುವೆಯ ಸಮೀಪ ಎಪ್ರಿಲ್ 10ರಂದು ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ‘‘ ತನ್ನ ಭಾವಿ ಪತಿಯ ಜೊತೆ ಪಡಿತರ ಚೀಟಿಯ ಕೆಲಸ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಕಾಲುವೆಯ ಸಮೀಪದ ಮರವೊಂದರ ಕೆಳಗೆ ಆಹಾರ ಸೇವಿಸಲು ತಂಗಿದ್ದೆವು. ಈ ಸಂದರ್ಭ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ”, ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಕಸ್ಗಂಜ್ ಪೊಲೀಸ್ ಅಧೀಕ್ಷಕ ಅಂಕಿತ್ ಶರ್ಮಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News