ಮೆಹುಲ್ ಚೊಕ್ಸಿ ಬಂಧನ ಸುದ್ದಿ ಪ್ರಚಾರ ತಂತ್ರ: ಕಾಂಗ್ರೆಸ್ ಆರೋಪ

Update: 2025-04-15 21:06 IST
Mehul Choksi

ಮೆಹುಲ್ ಚೊಕ್ಸಿ | PC : NDTV 

  • whatsapp icon

ಹೊಸದಿಲ್ಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,000 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತವನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೊಕ್ಸಿಯ ಬಂಧನವು ಮಾಧ್ಯಮಗಳಲ್ಲಿ ಧನಾತ್ಮಕ ಸುದ್ದಿ ಬರುವಂತೆ ನೋಡಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಈ ಬೃಹತ್ ಬ್ಯಾಂಕಿಂಗ್ ಹಗರಣದಿಂದ ಹಣ ಕಳೆದುಕೊಂಡಿರುವ ಜನರಿಗೆ ಆ ಹಣ ಮತ್ತೆ ಸಿಗುತ್ತದೆಯೇ ಎಂದು ಅದು ಪ್ರಶ್ನಿಸಿದೆ.

ಚೊಕ್ಸಿಯನ್ನು ಬೆಲ್ಜಿಯಮ್‌ನಲ್ಲಿ ಬಂಧಿಸಲಾಗಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯ ಚೊಕ್ಸಿ ಪ್ರಕರಣದ ತನಿಖೆ ನಡೆಸುತ್ತಿವೆ. ಈ ತನಿಖಾ ಸಂಸ್ಥೆಗಳ ಮನವಿಯಂತೆ ಚೊಕ್ಸಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.

‘‘ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯೊಂದು ನನಗೆ ನೆನಪಾಗುತ್ತಿದೆ. ಮೆಹುಲ್ ಭಾಯಿಯನ್ನು ವಾಪಸ್ ಕರೆತರಲು ನಾವು ಖಾಸಗಿ ವಿಮಾನವೊಂದನ್ನು ಡೋಮಿನಿಕಕ್ಕೆ ಕಳುಹಿಸಿದ್ದೆವು. ಮೆಹುಲ್ ಚೊಕ್ಸಿಯನ್ನು ಪ್ರಧಾನಿ ನರೇಂದ್ರೆ ಮೋದಿ ಮೆಹುಲ್ ಭಾಯಿ ಎಂಬುದಾಗಿ ಕರೆಯುತ್ತಾರೆ. ಅದಕ್ಕಾಗಿ ದೇಶವು ಸುಮಾರು 44 ಕೋಟಿ ರೂ. ಖರ್ಚು ಮಾಡಿತು. ಆದರೆ, ಚೊಕ್ಸಿ ಬರಲಿಲ್ಲ’’ ಎಂದು ಹಿರಿಯ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ ಹೇಳಿದರು.

2021ರಲ್ಲಿ ಸಿಬಿಐ ಮತ್ತು ವಿದೇಶ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳನ್ನು ಹೊತ್ತ ವಿಮಾನವೊಂದು ಚೊಕ್ಸಿಯನ್ನು ಕರೆ ತರುವುದಕ್ಕಾಗಿ ಡೋಮಿನಿಕಕ್ಕೆ ತೆರಳಿದ್ದ ಘಟನೆಯನ್ನು ಶ್ರೀನಾತೆ ಪ್ರಸ್ತಾಪಿಸಿದ್ದಾರೆ.

ಜನರ ಹಣವನ್ನು ಲೂಟಿ ಮಾಡಿ ವಿದೇಶಗಳಿಗೆ ಪರಾರಿಯಾಗಿರುವ ವ್ಯಕ್ತಿಗಳನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವಲ್ಲಿ ನರೇಂದ್ರ ಮೋದಿ ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ‘‘ಮೆಹುಲ್ ಚೊಕ್ಸಿಯಾಗಿರಲಿ, ನೀರವ್ ಮೋದಿಯಾಗಿರಲಿ, ವಿಜಯ ಮಲ್ಯ ಅಥವಾ ವಿನಯ ಮಿತ್ತಲ್ ಅಥವಾ ಯಾರೇ ಆಗಿರಲಿ. ಇವರು ಯಾರೂ ಭಾರತಕ್ಕೆ ವಾಪಸ್ ಆಗಿಲ್ಲ. ಇದು ವಾಸ್ತವ. ಮೋದಿಯ ಮೂಗಿನಡಿಯಲ್ಲಿ 33 ಆರ್ಥಿಕ ಅಪರಾಧಿಗಳು ಭಾರತೀಯರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ’’ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News