ಪಶ್ಚಿಮಬಂಗಾಳ: ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಬಿಗಿ ಭದ್ರತೆ

Update: 2025-04-15 20:55 IST
ಪಶ್ಚಿಮಬಂಗಾಳ: ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಬಿಗಿ ಭದ್ರತೆ

PC : PTI 

  • whatsapp icon

ಕೋಲ್ಕತಾ: ವಕ್ಫ್ (ತಿದ್ದುಪಡಿ) ಕಾಯ್ದೆ ಕುರಿತಂತೆ ಪಶ್ಚಿಮಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಯಾವುದೇ ಹೊಸ ಹಿಂಸಾಚಾರ ನಡೆಯದಂತೆ ಭದ್ರತಾ ಪಡೆಗಳು ಮಂಗಳವಾರ ಕಟ್ಟೆಚ್ಚರ ವಹಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 48 ಗಂಟೆಗಳಲ್ಲಿ ಹೊಸ ಹಿಂಸಾಚಾರದ ಘಟನೆಗಳು ವರದಿಯಾಗದ ಜಂಗಿಪುರ, ಧುಲಿಯಾನ್, ಸುತಿ ಹಾಗೂ ಶಂಶೆರ್‌ಗಂಜ್‌ನಲ್ಲಿ ಬಿಎಸ್‌ಎಫ್, ಸಿಆರ್‌ಪಿಎಫ್, ರಾಜ್ಯ ಶಶಸ್ತ್ರ ಪೊಲೀಸ್ ಹಾಗೂ ಆರ್‌ಎಎಫ್‌ ನ ಸಿಬ್ಬಂದಿಯನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುರ್ಶಿದಾಬಾದ್‌ನ ಗಲಭೆ ಪೀಡಿತ ಪ್ರದೇಶಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಅಂಗಡಿಗಳು ತೆರೆಯುತ್ತಿವೆ ಹಾಗೂ ಸ್ಥಳಾಂತರಗೊಂಡ ಕುಟುಂಬಗಳು ಹಿಂದಿರುಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ವಕ್ಫ್ (ತಿದ್ದುಪಡಿ) ಕಾಯ್ದೆ ಕುರಿತಂತೆ ಸುಟಿ, ಧುಲಿಯಾನ್ ಹಾಗೂ ಜೈಪುರ ಸೇರಿದಂತೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಎಪ್ರಿಲ್ 11 ಹಾಗೂ 12ರಂದು ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಇದರಿಂದ ಮೂವರು ಸಾವನ್ನಪ್ಪಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.

‘‘ತಮ್ಮ ಮನೆ ತ್ಯಜಿಸಿದವರಲ್ಲಿ ಹಲವರು ಹಿಂದಿರುಗಿದ್ದಾರೆ. ಹಿಂಸಾಚಾರ ಪೀಡಿತ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಸಂತ್ರಸ್ತ ಜನರಿಗೆ ರಾಜ್ಯ ಸರಕಾರ ನೆರವು ನೀಡುತ್ತಿದೆ’’ ಎಂದು ಜಂಗಿಪುರದ ಟಿಎಂಸಿ ಸಂಸದ ಖಲಿಲುರ್ ರೆಹ್ಮಾನ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಸಂತ್ರಸ್ತರ ಹೆಸರನ್ನು ಸಂಗ್ರಹಿಸುತ್ತಿದ್ದು, ಅದು ಆಸ್ತಿ-ಪಾಸ್ತಿಗಳಿಗೆ ಆಗಿರುವ ಹಾನಿಗೆ ಪರಿಹಾರವನ್ನು ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News