ಮಧ್ಯಪ್ರದೇಶ: ದಲಿತ ವರನಿಗೆ ದೇವಾಲಯ ಪ್ರವೇಶ ನಿರಾಕರಣೆ

Update: 2025-04-15 20:56 IST
ಮಧ್ಯಪ್ರದೇಶ: ದಲಿತ ವರನಿಗೆ ದೇವಾಲಯ ಪ್ರವೇಶ ನಿರಾಕರಣೆ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಇಂದೋರ್ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವಾದ ಸೋಮವಾರ ದಲಿತ ಸಮುದಾಯಕ್ಕೆ ಸೇರಿದ ವರನಿಗೆ ದೇವಾಲಯ ಪ್ರವೇಶಕ್ಕೆ ನಿರಾಕರಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೋಮವಾರ ನಡೆದಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1891 ಎಪ್ರಿಲ್ 14ರಂದು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮಹುವಿನಲ್ಲಿ ಜನಿಸಿದರು. ಈಗ ಅದೇ ಮಹು ಗ್ರಾಮ ಇರುವ ಜಿಲ್ಲೆಯಲ್ಲೇ ಈ ಜಾತಿ ತಾರತಮ್ಯದ ಘಟನೆ ನಡೆದಿದೆ.

ಪ್ರತ್ಯಕ್ಷದರ್ಶಿಗಳು ಹಾಗೂ ಸಾಮಾಜಿಕ ಮಾಧ್ಯಮದ ವೀಡಿಯೊಗಳು ನೀಡಿದ ಮಾಹಿತಿ ಪ್ರಕಾರ, ಬಲಾಯಿ ಸಮುದಾಯಕ್ಕೆ ಸೇರಿದ ವರ ವಿವಾಹ ಮೆರವಣಿಗೆ ಹಾಗೂ ಅತಿಥಿಗಳೊಂದಿಗೆ ಮಹು ಪಟ್ಟಣದಿಂದ 25 ಕಿ.ಮೀ. ದೂರದ ಸಂಘವಿ ಗ್ರಾಮದಲ್ಲಿರುವ ರಾಮ ಮಂದಿರಕ್ಕೆ ಆಗಮಿಸಿದ್ದ. ಆದರೆ, ಆತನಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡಲಿಲ್ಲ.

ಘಟನೆಯ ಕುರಿತು ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ. ಒಂದು ವೀಡಿಯೊದಲ್ಲಿ ವರ ವಿವಾಹ ಮೆರವಣಿಗೆ ಹಾಗೂ ಅತಿಥಿಗಳೊಂದಿಗೆ ದೇವಾಲಯದ ಹೊರಗೆ ನಿಂತುಕೊಂಡು ಪ್ರಬಲ ಜಾತಿಗಳ ಸದಸ್ಯರೆಂದು ಹೇಳಲಾದ ವ್ಯಕ್ತಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ.

ಆದರೆ, ದಲಿತ ವ್ಯಕ್ತಿಗೆ ದೇವಾಲಯ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ ಎಂಬ ಪ್ರತಿಪಾದನೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಸ್ಥಳೀಯ ಸಂಪ್ರದಾಯದ ಪ್ರಕಾರ ಅರ್ಚಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುವ ಗರ್ಭ ಗುಡಿಗೆ ಪ್ರವೇಶಿಸುವ ಕುರಿತಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು ಎಂದು ಅವರು ಪ್ರತಿಪಾದಿಸಿದ್ದಾರೆ.

ವಿವಾಹದ ಮೆರವಣಿಗೆಯ ಸದಸ್ಯರು ಹಾಗೂ ಇನ್ನೊಂದು ಗುಂಪಿನ ನಡುವಿನ ವಾಗ್ವಾದದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು. ದೇವಾಲಯದ ಗರ್ಭ ಗುಡಿ ಪ್ರವೇಶಿಸುವ ಕುರಿತು ಎರಡೂ ಗುಂಪಿನ ಸದಸ್ಯರಿಗೆ ಮನವರಿಕೆ ಮಾಡಲಾಯಿತು. ಅನಂತರ ವರನ ಕುಟುಂಬ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿತು ಹಾಗೂ ಶಾಂತಿಯುತವಾಗಿ ಮೆರವಣಿಗೆ ನಡೆಸಿತು ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ಇಂಡಿಯಾ ಬಲಾಯಿ ಮಹಾಸಂಘದ ಅಧ್ಯಕ್ಷ ಮನೋಜ್ ಪರ್ಮಾರ್, ಕೆಲವರ ಹತಾಶ ಮನಸ್ಥಿತಿಯಿಂದಾಗಿ ನಮ್ಮ ಸಮುದಾಯ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಜಾತಿ ತಾರತಮ್ಯ ಎದುರಿಸಬೇಕಾಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News