ಮತದಾರರ ಸಂಖ್ಯೆಯಲ್ಲಿ ಆಗಿರುವ ಅಗಾಧ ಹೆಚ್ಚಳಕ್ಕೆ ಚುನಾವಣಾ ಆಯೋಗ ವಿವರಣೆ ನೀಡಬೇಕು: ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಸ

Update: 2025-04-15 21:12 IST
Election Commission

ಚುನಾವಣಾ ಆಯೋಗ | PTI  

  • whatsapp icon

ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗಳು ಸೇರಿದಂತೆ ಇತ್ತೀಚಿನ ಚುನಾವಣೆಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಆಗಿರುವ ಅಗಾಧ ಹೆಚ್ಚಳದ ಬಗ್ಗೆ ಚುನಾವಣಾ ಆಯೋಗವು ಸ್ಪಷ್ಟೀಕರಣ ನೀಡಬೇಕು ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಸ ಹೇಳಿದ್ದಾರೆ.

ಈ ಚುನಾವಣೆಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳದ ಬಗ್ಗೆ ಪ್ರತಿಪಕ್ಷಗಳು ಪದೇ ಪದೇ ಕಳವಳ ವ್ಯಕ್ತಪಡಿಸಿವೆ.

‘‘ಮತದಾರನ ಅನನ್ಯತೆಯನ್ನು ಗುರುತಿಸುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ಯಾಕೆಂದರೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಆಧಾರನ್ನು ಹೊಂದಲು ಸಾಧ್ಯವಿಲ್ಲ. ಮತದಾರರ ಸಂಖ್ಯೆಯಲ್ಲಿ ಆಗಿರುವ ಭಾರೀ ಹೆಚ್ಚಳಕ್ಕೆ ಸಂಬಂಧಿಸಿ, ನೋಂದಾಯಿತ ಮತದಾರರ ಸಂಖ್ಯೆಯಲ್ಲಿ ಅಸಹಜ ಹೆಚ್ಚಳ ಯಾಕೆ ಆಗಿದೆ ಎನ್ನುವುದಕ್ಕೆ ಚುನಾವಣಾ ಆಯೋಗವು ವಿವರಣೆ ಕೊಡಬೇಕು’’ ಎಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಲವಸ ಹೇಳಿದರು.

‘‘ಇದು ಸಮಸ್ಯೆಯ ಒಂದು ಭಾಗ. ಇಲ್ಲಿರುವ ಮೂಲ ಪ್ರಶ್ನೆಯೆಂದರೆ, ಈ ವ್ಯಕ್ತಿಗಳು ಬೇರೊಂದು ಸ್ಥಳದಲ್ಲಿ ಈಗಾಗಲೇ ಮತದಾರರಾಗಿ ನೋಂದಾಯಿತರಾಗಿದ್ದರೆ ಮತ್ತು ಇಲ್ಲಿಯೂ ನೋಂದಾಯಿತರಾಗಿದ್ದರೆ ಅವರನ್ನು ಹೇಗೆ ತೆಗೆದುಹಾಕುವುದು ಎನ್ನುವುದು. ಚುನಾವಣಾ ಆಯೋಗವು ಈಗಾಗಲೇ ರಾಜಕೀಯ ಪಕ್ಷಗಳು ಮತ್ತು ತಾಂತ್ರಿಕ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಹಾಗಾಗಿ, ಅದೊಂದು ಪರಿಹಾರವನ್ನು ಕಂಡುಕೊಳ್ಳಲೇಬೇಕು. ಯಾಕೆಂದರೆ, ಈಗಾಗಲೇ 98 ಕೋಟಿ ಜನರು ಮತದಾರರಾಗಿ ನೋಂದಾಯಿಸಿದ್ದಾರೆ’’ ಎಂದು ಲವಸ ನುಡಿದರು.

ಒಂದಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ಎಷ್ಟು ಜನರನ್ನು ಮತದಾರರಾಗಿ ನೋಂದಾಯಿಸಬಹುದು ಎನ್ನುವುದು ಇನ್ನೂ ತಿಳಿದಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಹೇಳಿದರು. ‘‘ನನ್ನ ಪ್ರಕಾರ, ಈ ನಕಲಿ ಹೆಸರುಗಳನ್ನು ತೆಗೆದುಹಾಕಲು ಬಳಸಬಹುದಾದ ಏಕೈಕ ದಾಖಲೆಯೆಂದರೆ ಆಧಾರ್’’ ಎಂದು ಅವರು ನುಡಿದರು.

ಆಧಾರನ್ನು ಮತದಾರರ ಚೀಟಿಯೊಂದಿಗೆ ಜೋಡಿಸುವುದು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರುಗಳನ್ನು ನೋಂದಾಯಿಸಿಕೊಂಡಿರುವ ಮತದಾರರನ್ನು ತೆಗೆದುಹಾಕಲು ಇರುವ ಏಕೈಕ ವಿಧಾನವಾಗಿದೆ, ಯಾಕೆಂದರೆ ಅದರಲ್ಲಿ ವೈಯಕ್ತಿಕ ಜೈವಿಕ ಗುರುತುಗಳಿವೆ ಎಂದು ಲವಸ ಹೇಳಿದರು. ಆದರೆ, ಮತದಾನದ ಹಕ್ಕನ್ನು ಆಧಾರ್ ಹೊಂದಿದವರಿಗೆ ಮಾತ್ರ ಸೀಮಿತಗೊಳಿಸಲಾಗದು ಎಂದರು.

‘‘ಆಧಾರ್ ಕಾರ್ಡ್ ಪಡೆಯುವುದು ಕಡ್ಡಾಯವಲ್ಲ ಎನ್ನುವುದನ್ನು ಆಧಾರ್ ಕಾಯ್ದೆ ಹೇಳುತ್ತದೆ. ಮತದಾನ ಹಕ್ಕು ಆಧಾರ್ ಹೊಂದುವುದನ್ನು ಅವಲಂಬಿಸಿಲ್ಲ ಎನ್ನುವ ನಿಲುವನ್ನು ಚುನಾವಣಾ ಆಯೋಗ ಹೊಂದಿದೆ ಎಂದು ನನಗನಿಸುತ್ತದೆ. ಅವುಗಳನ್ನು ಪ್ರತ್ಯೇಕಿಸಬೇಕು. ನಕಲಿ ಮತದಾರರನ್ನು ತೆಗೆದುಹಾಕಲು ಆಡಳಿತಾತ್ಮಕ ಉದ್ದೇಶಗಳಿಗೆ ಆಧಾರ್ ಬಳಸಬಹುದು’’ ಎಂದು ಲವಸ ನುಡಿದರು.

2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ವಿವಾದಗಳಲ್ಲಿ ಅಶೋಕ್ ಲವಸ ಹಲವು ಭಿನ್ನಮತದ ನಿರ್ಧಾರಗಳನ್ನು ನೀಡುವ ಮೂಲಕ ನರೇಂದ್ರ ಮೋದಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ, ಅವರು 2020ರ ಆಗಸ್ಟ್‌ ನಲ್ಲಿ ರಾಜೀನಾಮೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News