ಕೇರಳ ದೇವಾಲಯದಲ್ಲಿ 'ಕ್ರಾಂತಿಕಾರಿ ಗೀತೆ'ಗಳನ್ನು ಹಾಡಿದ ಗಾಯಕ ಅಲೋಶಿ ಆ್ಯಡಮ್ಸ್ ವಿರುದ್ಧ ಪ್ರಕರಣ ದಾಖಲು

Photo : Aloshi Adams/Facebook
ತಿರುವನಂತಪುರಂ: ಕೊಲ್ಲಂ ಜಿಲ್ಲೆಯಲ್ಲಿ ನಡೆದ ದೇವಾಲಯದ ಕಾರ್ಯಕ್ರಮವೊಂದರಲ್ಲಿ ಸಿಪಿಎಂ ಅನ್ನು ವೈಭವೀಕರಿಸುವ ʼಕ್ರಾಂತಿಕಾರಿ ಗೀತೆʼಗಳನ್ನು ಹಾಡಿದ ಆರೋಪದ ಮೇಲೆ ಎಪ್ರಿಲ್ 3ರಂದು ಗಾಯಕ ಅಲೋಶಿ ಆ್ಯಡಮ್ಸ್ ಹಾಗೂ ದೇವಾಲಯದ ಸಲಹಾ ಸಮಿತಿಯ ಸದಸ್ಯರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರ್ಚ್ 10ರಂದು ಕಡಕ್ಕಲ್ ದೇವಾಲಯದಲ್ಲಿ ನಡೆದಿದ್ದ ಹಬ್ಬವೊಂದರಲ್ಲಿ ಈ ವಿವಾದ ಭುಗಿಲೆದ್ದಿತ್ತು. ಕಡಕ್ಕಲ್ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಪ್ರಕಾರ, ಗಾಯಕ ಅಲೋಶಿ ಆ್ಯಡಮ್ಸ್ ‘ಪುಷ್ಪನೆ ಅರಿಯಾಮೊ’ ಹಾಗೂ ‘ನೂರು ಪೂಕ್ಕಳೆ’ ಗೀತೆಗಳನ್ನು ಹಾಡುವಾಗ ಸಿಪಿಎಂ ಪಕ್ಷ ಹಾಗೂ ಡಿವೈಎಫ್ಐ ಸಂಘಟನೆಯ ಚಿಹ್ನೆಗಳು ಎಲ್ಇಡಿ ಪ್ರದರ್ಶನ ಫಲಕಗಳಲ್ಲಿ ಪ್ರದರ್ಶನಗೊಂಡಿದ್ದವು ಎಂದು ಆರೋಪಿಸಲಾಗಿದೆ. 1994ರಲ್ಲಿ ನಡೆದಿದ್ದ ಕುತ್ತುಪರಂಬ ಪೊಲೀಸ್ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಸಿಪಿಎಂ ಕಾರ್ಯಕರ್ತ ಪುತ್ತುಕುಡಿ ಪುಷ್ಪನ್ ಅವರಿಗೆ ‘ಪುಷ್ಪನೆ ಅರಿಯಾಮೊ’ ಗೀತೆ ಗೌರವ ನಮನ ಸಲ್ಲಿಸುತ್ತದೆ.
ಕಲ್ಲಕ್ಕಡ್ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ನಲ್ಲಿ ಗಾಯಕ ಅಲೋಶಿ ಆ್ಯಡಮ್ಸ್ ರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದ್ದು, ಧಾರ್ಮಿಕ ಸಂಸ್ಥೆಗಳು ಮತ್ತು ಹಬ್ಬಗಳಲ್ಲಿ ಯಾವುದೇ ರಾಜಕೀಯ ಸಿದ್ಧಾಂತಗಳ ಪ್ರಚಾರ ಮಾಡುವುದು ಅಥವಾ ರಾಜಕೀಯ ಚಿಹ್ನೆಗಳನ್ನು ಬಳಸುವುದನ್ನು ನಿಷೇಧಿಸಿರುವ ಧಾರ್ಮಿಕ ಸಂಸ್ಥೆಗಳು (ದುರ್ಬಳಕೆ ತಡೆ) ಕಾಯ್ದೆಯ ಸೆಕ್ಷನ್ 3, 5, 6, ಹಾಗೂ 7ರ ಅಡಿ ದೇವಾಲಯ ಸಲಹಾ ಸಮಿತಿಯ ಸದಸ್ಯರ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಗಾಯಕ ಅಲೋಶಿ ಆ್ಯಡಮ್ಸ್, “ಎಫ್‌ಐಆರ್ ದಾಖಲಾಗಿರುವ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಆ ಗೀತೆಗಳನ್ನು ಸ್ಥಳದಲ್ಲಿದ್ದ ಪ್ರೇಕ್ಷಕರ ಕೋರಿಕೆಯ ಮೇರೆಗೆ ಹಾಡಿದೆ. ಇದರಿಂದ ಕೆಲವರಿಗೆ ಮುಜುಗರವಾದರೂ, ಬೇರಾವ ಸಮಸ್ಯೆಯೂ ಆಗಲಿಲ್ಲ. ಮಾಧ್ಯಮಗಳ ಮೂಲಕ ನನಗೆ ಎಫ್‌ಐಆರ್ ದಾಖಲಾದ ಬಗ್ಗೆ ತಿಳಿದು ಬಂದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.