ಅತ್ಯಾಚಾರ ಪ್ರಕರಣದ ಆರೋಪಿ ಗುರ್ಮೀತ್ ಸಿಂಗ್ ಪೆರೋಲ್ ಮೇಲೆ ಮತ್ತೆ ಬಿಡುಗಡೆ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ (PTI)
ಹೊಸದಿಲ್ಲಿ: ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ 20ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ಗೆ ಹರ್ಯಾಣ ಸರಕಾರ 21 ದಿನಗಳ ಪೆರೋಲ್ ಮಂಜೂರು ಮಾಡಿದೆ. ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಬುಧವಾರ ಬೆಳಿಗ್ಗೆ ಗುರ್ಮೀತ್ ಸಿಂಗ್ ಹೊರ ಬಂದಿದ್ದು, 2020ರಿಂದ ಈತನಿಗೆ 13 ಬಾರಿ ಪೆರೋಲ್ ನೀಡಲಾಗಿದೆ.
ಗುರ್ಮೀತ್ ಸಿಂಗ್ ಬುಧವಾರ ಮುಂಜಾನೆ ಸುನಾರಿಯಾ ಜೈಲಿನಿಂದ ಹೊರಬಂದು ಸಿರ್ಸಾದಲ್ಲಿರುವ ತನ್ನ ಡೇರಾದ ಪ್ರಧಾನ ಕಚೇರಿಗೆ ತೆರಳಿದನು. ದಿಲ್ಲಿ ಚುನಾವಣೆಗೆ ಒಂದು ವಾರದ ಮೊದಲು 30 ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾಗಿದ್ದ ಗುರ್ಮೀತ್ ಸಿಂಗ್ ಸಿರ್ಸಾದಲ್ಲಿರುವ ಡೇರಾದ ಪ್ರಧಾನ ಕಛೇರಿಯಲ್ಲಿ ತಂಗಿದ್ದ.
ಈ ಮೊದಲು ಹರ್ಯಾಣ, ಪಂಜಾಬ್, ದಿಲ್ಲಿ, ರಾಜಸ್ಥಾನದ ಚುನಾವಣೆಯ ವೇಳೆ ಗುರ್ಮೀತ್ ಸಿಂಗ್ ಬಿಡುಗಡೆ ನಡೆದಿತ್ತು. ಈ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುರ್ಮೀತ್ ಸಿಂಗ್‌ಗೆ ಅಭಿಮಾನಿಗಳಿದ್ದು, ಬಿಡುಗಡೆಯ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂದು ಹೇಳಲಾಗಿದೆ.