ತಡರಾತ್ರಿ ಸಂಸತ್ ಅಧಿವೇಶನ, ಮಹಾರಾಷ್ಟ್ರ ಚುನಾವಣೆ ವಂಚನೆ: ಎಐಸಿಸಿ ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ (Photo credit: X/@INCIndia)
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ತೀವ್ರ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು ವಂಚನೆ ಮೂಲಕ ಗೆಲುವು ಪಡೆದುಕೊಂಡಿದೆ ಎಂದು ಆರೋಪಿಸಿದರು. ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಖರ್ಗೆ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿದರು.
ಸಬರಮತಿ ನದಿ ದಡದಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿ ನೇತೃತ್ವದ ಸರಕಾರ ವ್ಯವಸ್ಥಿತವಾಗಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಿತ್ತೊಗೆಯುತ್ತಿದೆ. ಆಯ್ದ ಕೆಲವು ಬಂಡವಾಳಶಾಹಿಗಳ ಲಾಭಕ್ಕಾಗಿ ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ಏನಾಯಿತು? ನಾವು ಎಲ್ಲಾ ಕಡೆ ಈ ವಿಚಾರವನ್ನು ಪ್ರಸ್ತಾಪಿಸಿದೆವು. ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ಬಲವಾಗಿ ಪ್ರಸ್ತಾಪಿಸಿದರು. ಅವರು ಮತದಾರರ ಪಟ್ಟಿಯನ್ನು ಯಾವ ರೀತಿ ಮಾಡಿದರು? ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಸವಾಗಿದೆ. ಹರ್ಯಾಣದಲ್ಲಿ ಅದೇ ನಡೆದಿದೆ. ಬಿಜೆಪಿ ಶೇಕಡಾ 90 ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಹಿಂದೆಂದೂ ಸಂಭವಿಸಿರಲಿಲ್ಲ. ಪ್ರಜಾಪ್ರಭುತ್ವವನ್ನು ನಾಶ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದಂತಹ ವಂಚನೆ ಹಿಂದೆಂದೂ ನಡೆದಿಲ್ಲ. ನಾವು ಅದರ ಬಗ್ಗೆ ಕಂಡುಹಿಡಿಯುತ್ತೇವೆ. ಕಳ್ಳ ಸಿಕ್ಕಿ ಬೀಳುತ್ತಾನೆ. ನಮ್ಮ ವಕೀಲರು ಮತ್ತು ನಾಯಕರು ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ಕಳೆದ 11 ವರ್ಷಗಳಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳ ಮೇಲೆ ದಾಳಿ ನಡೆಯುತ್ತಿದೆ. ಅವುಗಳನ್ನು ರಕ್ಷಿಸಲು ನಾವು ಹೋರಾಡಬೇಕಾಗಿದೆ. ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊನೆಗೊಳಿಸಲಾಗುತ್ತಿದೆ. ಪ್ರಮುಖ ಸಂಸ್ಥೆಗಳು ಮತ್ತು ಸಂಸದೀಯ ಕಾರ್ಯವಿಧಾನಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಪ್ರತಿಪಕ್ಷಗಳ ಧ್ವನಿಯನ್ನು ಸರಕಾರ ಹತ್ತಿಕ್ಕಿದೆ. ಇತ್ತೀಚಿನ ಸಂಸತ್ತಿನ ಅಧಿವೇಶನದ ಬಗ್ಗೆ ಉಲ್ಲೇಖಿಸಿದ ಅವರು, ವಿರೋಧ ಪಕ್ಷದ ನಾಯಕನಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ. ನೀವು ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡದಿದ್ದರೆ ಜನರಿಗೆ ಧ್ವನಿ ಎತ್ತಲು ಹೇಗೆ ಅವಕಾಶ ನೀಡುತ್ತೀರಿ. ಮಣಿಪುರ ಬಿಕ್ಕಟ್ಟು, ಕೋಮು ಚರ್ಚೆಗಳನ್ನು ಸಂಸತ್ತಿನಲ್ಲಿ ತಡರಾತ್ರಿ ನಡೆಸಲಾಗುತ್ತಿದೆ ಎಂದು ಹೇಳಿದರು.
500 ವರ್ಷಗಳಷ್ಟು ಹಳೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಕೋಮು ಭಾವನೆಗಳನ್ನು ಕೆರಳಿಸುತ್ತಿರುವ ಬಿಜೆಪಿ-ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಪ್ರಧಾನಿ ಮೋದಿ ʼಬೆಂಕಿ ಉರಿಸಿದರೆʼ ಆರೆಸ್ಸೆಸ್ ಅದಕ್ಕೆ ʼಇಂಧನ ಸುರಿಯುತ್ತಿದೆʼ. ನಾವು ಎರಡನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡುತ್ತಿದ್ದೇವೆ, ವ್ಯತ್ಯಾಸವೆಂದರೆ ಮೊದಲು ವಿದೇಶಿಗರು ಕೋಮುವಾದ, ಬಡತನ, ಅಸಮಾನತೆಗಳಿಂದ ಲಾಭ ಪಡೆಯುತ್ತಿದ್ದರು, ಈಗ ದೇಶದ ಸ್ವಂತ ಸರಕಾರ ಇವುಗಳಿಂದ ಲಾಭ ಪಡೆಯುತ್ತಿದೆ ಎಂದು ಖರ್ಗೆ ಆರೋಪಿಸಿದರು.