ANI ಮಾನನಷ್ಟ ಪ್ರಕರಣ: ವಿಕಿಪೀಡಿಯಾದಿಂದ ಪುಟವನ್ನು ತೆಗೆದು ಹಾಕುವಂತೆ ಸೂಚಿಸಿದ ದಿಲ್ಲಿ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ತರಾಟೆ

ANI , Wikipedia
ಹೊಸದಿಲ್ಲಿ: ಸುದ್ದಿಸಂಸ್ಥೆ ಎಎನ್ಐ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ವಿಕಿಪೀಡಿಯಾದಿಂದ ಪುಟವನ್ನು ತೆಗೆದುಹಾಕಲು ವಿಕಿಮೀಡಿಯಾ ಫೌಂಡೇಶನ್‌ಗೆ ಸೂಚಿಸಿದ ದಿಲ್ಲಿ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ಸುದ್ದಿ ಸಂಸ್ಥೆ ಎಎನ್ಐ ಸಲ್ಲಿಸಿದ 2 ಕೋಟಿ ರೂ. ಮಾನನಷ್ಟ ಪ್ರಕರಣದ ವಿಚಾರಣೆಯ ವೇಳೆ ಅಕ್ಟೋಬರ್ 16ರಂದು ವಿಕಿಪೀಡಿಯಾದಿಂದ ಪುಟವನ್ನು ತೆಗೆದು ಹಾಕುವಂತೆ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಅವರ ನೇತೃತ್ವದ ದಿಲ್ಲಿ ಹೈಕೋರ್ಟ್ ಪೀಠವು ಸೂಚಿಸಿತ್ತು.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ಪ್ರತಿದಿನ ಮಾಧ್ಯಮಗಳಲ್ಲಿ ನಾವು ನ್ಯಾಯಾಲಯದ ಬಗ್ಗೆ ತೀವ್ರವಾದ ಟೀಕೆಗಳನ್ನು ನೋಡುತ್ತೇವೆ. ವಿಕಿಪೀಡಿಯಾ ಪುಟದಲ್ಲಿ ನ್ಯಾಯಾಲಯದ ನಿಂದನೆಯಾಗಿದೆ ಎಂಬ ತೀರ್ಮಾನಕ್ಕೆ ಬರದ ಹೊರತು ಪೀಠವು ಇಷ್ಟೇಕೆ ಸೂಕ್ಷ್ಮವಾಯಿತು? ಇಂತಹ ಟೀಕೆ ಏನೇನೂ ಅಲ್ಲ. ಅದನ್ನು ಓದಿ ಕೆಲ ದಿನಗಳಲ್ಲಿ ಮರೆತುಬಿಡಲಾಗುತ್ತದೆ ಎಂದು ಹೇಳಿದೆ.
ಸುದ್ದಿ ಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ವಿಕಿಮೀಡಿಯಾ ಫೌಂಡೇಶನ್ ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಪ್ರಕಟಿಸಿದೆ ಎಂದು ಎಎನ್ಐ ತನ್ನ ದಾವೆಯಲ್ಲಿ ಆರೋಪಿಸಿತ್ತು.