ವಕ್ಫ್ ತಿದ್ದುಪಡಿ ಮಸೂದೆಗೆ ಕಳವಳ: ರಾಷ್ಟ್ರಪತಿಗಳ ತುರ್ತು ಭೇಟಿಗೆ ಅವಕಾಶ ಕೋರಿದ AIMPLB

ಹೊಸದಿಲ್ಲಿ: ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಗೆ ಅಂಕಿತ ಹಾಕುವುದಕ್ಕೂ ಮುನ್ನ ತುರ್ತು ಭೇಟಿಗೆ ಅವಕಾಶ ನೀಡಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (AIMPLB) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಫಝ್ಲುರ್ ರಹೀಂ ಮುಜದ್ದದಿ ಬರೆದಿರುವ ಪತ್ರದ ಸಾರಾಂಶವನ್ನು ಬಿಡುಗಡೆ ಮಾಡಿ ಮಾತನಾಡಿದ ಮಂಡಳಿಯ ವಕ್ತಾರ ಡಾ. ಎಸ್.ಕ್ಯೂ.ಆರ್. ಇಲ್ಯಾಸ್, “ಮಸೂದೆಯ ಮೂಲಕ ಪರಿಚಯಿಸಲಾಗಿರುವ ತಿದ್ದುಪಡಿಗಳಿಂದ, ಧಾರ್ಮಿಕ ಹಾಗೂ ದತ್ತಿ ಚಟುವಟಿಕೆಗಳಲ್ಲಿ ಐತಿಹಾಸಿಕ ಮಹತ್ವದ ಪಾತ್ರ ನಿರ್ವಹಿಸಿರುವ ವಕ್ಫ್ ಮಂಡಳಿಯ ಆಡಳಿತ ಹಾಗೂ ಸ್ವಾಯತ್ತತೆಯ ಮೇಲೆ ದುಷ್ಪರಿಣಾಮವುಂಟಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ, 2025 ಹಾಗೂ ಅದರಿಂದ ದೇಶಾದ್ಯಂತ ಇರುವ ಮುಸ್ಲಿಂ ಸಮುದಾಯದ ಮೇಲೆ ಆಗಲಿರುವ ದುಷ್ಪರಿಣಾಮಗಳ ಕುರಿತು ನಮ್ಮ ಕಳವಳ ವ್ಯಕ್ತಪಡಿಸುವುದು ಈ ಭೇಟಿಯ ಉದ್ದೇಶವಾಗಿದೆ. ಈ ಮಸೂದೆಯು ಸಂಪೂರ್ಣವಾಗಿ ಅಸಾಂವಿಧಾನಿಕವಾಗಿದ್ದು, ದೇಶದ ಮುಸ್ಲಿಮರ ಮೇಲಿನ ದಾಳಿಯಾಗಿದೆ” ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.