ನೆಲಸಮ ಕಾರ್ಯಾಚರಣೆ ವೇಳೆ ಗುಡಿಸಲಿನಿಂದ ಪುಸ್ತಕಗಳನ್ನು ಹೊತ್ತು ಓಡಿಬಂದ ಬಾಲಕಿಯ ಶಿಕ್ಷಣಕ್ಕೆ ನೆರವು ಘೋಷಿಸಿದ ಅಖಿಲೇಶ್ ಯಾದವ್

ಅಖಿಲೇಶ್ ಯಾದವ್ | PC : PTI
ಲಕ್ನೊ: ನೆಲಸಮ ಕಾರ್ಯಾಚರಣೆಯ ವೇಳೆ, ಬೆಂಕಿ ಬಿದ್ದಿದ್ದ ತನ್ನ ಗುಡಿಸಲಿನಿಂದ ಪುಸ್ತಕಗಳನ್ನು ಹೊತ್ತು ಹೊರಗೋಡಿ ಬಂದಿದ್ದ ಎಂಟು ವರ್ಷದ ಬಾಲಕಿಯ ಶಿಕ್ಷಣಕ್ಕೆ ನಿಧಿ ಒದಗಿಸಲಾಗುವುದು ಎಂದು ಶುಕ್ರವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅಖಿಲೇಶ್ ಯಾದವ್, “ಮಕ್ಕಳ ಭವಿಷ್ಯವನ್ನು ಹಾಳುಗೆಡವಿದವರು ನಿಜವಾಗಿಯೂ ನಿರ್ವಸತಿಗರು. ಈ ಬಾಲಕಿಗೆ ಶಿಕ್ಷಣ ಒದಗಿಸಲು ನಾವು ಪಣ ತೊಟ್ಟಿದ್ದೇವೆ. ಬುಲ್ಡೋಝರ್ ವಿಧ್ವಂಸಕಾರಿ ಶಕ್ತಿಯ ಸಂಕೇತವಾಗಿದೆಯೇ ಹೊರತು, ಜ್ಞಾನ, ತಿಳಿವಳಿಕೆ ಅಥವಾ ವಿವೇಕದ್ದಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಸರಕಾರದ ನೆಲಸಮ ಕಾರ್ಯಾಚರಣೆಯನ್ನೂ ಖಂಡಿಸಿರುವ ಅಖಿಲೇಶ್ ಯಾದವ್, “ಬುಲ್ಡೋಝರ್ ಗಳು ಅಹಂಕಾರದ ಇಂಧನದ ಮೇಲೆ ಓಡುತ್ತಿದ್ದು, ಅವಕ್ಕೆ ಯಾವುದೇ ನ್ಯಾಯದ ವಿವೇಚನೆಯಿಲ್ಲ” ಎಂದೂ ಟೀಕಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಅಂಬೇಡ್ಕರ್ ನಗರ್ ಜಿಲ್ಲೆಯ ಅರಾಳಿ ಗ್ರಾಮದಲ್ಲಿ ನಡೆದಿದ್ದ ನೆಲಸಮ ಕಾರ್ಯಾಚರಣೆ ವೇಳೆ ಎಂಟು ವರ್ಷದ ಬಾಲಕಿ ಅನನ್ಯಾ ಯಾದವ್, ತನ್ನ ಉರಿಯುತ್ತಿದ್ದ ಗುಡಿಸಲಿನಿಂದ ಪುಸ್ತಕಗಳನ್ನು ಎದೆಗವಚಿಕೊಂಡು ಹೊರಗೋಡಿ ಬಂದಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡಾ ಕಳವಳ ವ್ಯಕ್ತಪಡಿಸಿತ್ತು.
ಈ ವಸತಿ ಕಟ್ಟಡಗಳನ್ನು ಅತಿಕ್ರಮಣ ಮಾಡಿರುವ ಭೂಮಿಯಲ್ಲಿ ನಿರ್ಮಿಸಲಾಗಿತ್ತು ಎಂಬುದು ಉತ್ತರ ಪ್ರದೇಶ ಸರಕಾರದ ಆರೋಪವಾಗಿದೆ.