ಸಂಸತ್‌ ನಲ್ಲಿ ಮಾತನಾಡಲು ಸ್ಪೀಕರ್ ಅವಕಾಶವನ್ನೇ ಕೊಡುತ್ತಿಲ್ಲ: ರಾಹುಲ್ ಗಾಂಧಿ

Update: 2025-03-26 20:48 IST
Rahul Gandhi

ರಾಹುಲ್ ಗಾಂಧಿ | PC : PTI 

  • whatsapp icon

ಹೊಸದಿಲ್ಲಿ: ಸರಕಾರವು ಪ್ರತಿಪಕ್ಷದ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. ಹಲವು ದಿನಗಳಿಂದ ಸಂಸತ್‌ ನಲ್ಲಿ ಮಾತನಾಡಲು ತನಗೆ ಅವಕಾಶ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.

‘‘ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ನನಗೆ ಮಾತನಾಡಲು ಅವಕಾಶ ಕೊಡಿ ಎಂದು ನಾನು ಸ್ಪೀಕರ್‌ ಗೆ ಮನವಿ ಮಾಡಿದ್ದೇನೆ. ಆದರೆ, ಅವರು ಓಡಿಹೋಗುತ್ತಿದ್ದಾರೆ. ಇದು ಸದನವನ್ನು ನಡೆಸುವ ರೀತಿಯಲ್ಲ. ಈ ವಿಷಯದ ಬಗ್ಗೆ ನಾನು ಮಾತನಾಡಿದಾಗಲೆಲ್ಲ ಸ್ಪೀಕರ್ ನುಣುಚಿಕೊಳ್ಳುತ್ತಾರೆ. ಅವರು ನನಗೆ ಮಾತನಾಡಲು ಅವಕಾಶ ನೀಡಿಲ್ಲ. ಅವರು ಸಾಬೀತಾಗದ ಏನನ್ನೋ ನನ್ನ ಬಗ್ಗೆ ಹೇಳಿದ್ದಾರೆ ಮತ್ತು ಸದನವನ್ನು ಮುಂದೂಡಿದ್ದಾರೆ. ಅದರ ಅಗತ್ಯವಿರಲಿಲ್ಲ’’ ಎಂದು ಸಂಸತ್‌ ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಹೇಳಿದರು.

ಬುಧವಾರ ಲೋಕಸಭೆಯಲ್ಲಿ ಮಾತನಾಡಲು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಎದ್ದು ನಿಂತಾಗ ಸ್ಪೀಕರ್ ಹಠಾತ್ತನೆ ಸದನವನ್ನು ಮುಂದೂಡಿದರು.

‘‘ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡುವ ಸಂಪ್ರದಾಯವಿದೆ. ಆದರೆ, ಮಾತನಾಡಲು ನಾನು ಎದ್ದು ನಿಲ್ಲುವಾಗಲೆಲ್ಲ ನನಗೆ ಅನುಮತಿ ನಿರಾಕರಿಸಲಾಗುತ್ತಿದೆ. ಸದನವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ನನಗೆ ಗೊತ್ತಿಲ್ಲ, ನಮಗೆ ಏನನ್ನು ಹೇಳಬೇಕಾಗಿದೆಯೋ ಅದನ್ನು ಹೇಳಲು ಅವಕಾಶ ನೀಡಲಾಗುತ್ತಿಲ್ಲ’’ ಎಂದು ಕಾಂಗ್ರೆಸ್ ಸಂಸದ ನುಡಿದರು.

‘‘ಪ್ರಜಾಪ್ರಭುತ್ವದ ಆಶಯವನ್ನು ಗಾಳಿಗೆ ತೂರಲಾಗುತ್ತಿದೆ. ನಾನು ಮೌನವಾಗಿ ಕುಳಿತಿದ್ದೇನೆ. ಆದರೂ, ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ. ಇಲ್ಲಿ ಪ್ರತಿಪಕ್ಷಕ್ಕೆ ಸ್ಥಾನವಿಲ್ಲ, ಕೇವಲ ಸರಕಾರಕ್ಕೆ ಮಾತ್ರ ಇದೆ. ಪ್ರಧಾನಿಯವರು ಕುಂಭಮೇಳದ ಬಗ್ಗೆ ಮಾತನಾಡಿದ್ದಾರೆ. ನಾನು ಕೂಡ ಮಾತನಾಡಲು ಬಯಸಿದ್ದೆ. ನಿರುದ್ಯೋಗದ ಬಗ್ಗೆ ಮಾತನಾಡಲು ನಾನು ಬಯಸಿದ್ದೆ. ಆದರೆ, ನನಗೆ ಅವಕಾಶವನ್ನೇ ನೀಡಲಾಗಿಲ್ಲ. ಸ್ಪೀಕರ್‌ರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ. ನಾನು ಪ್ರತಿಪಕ್ಷ ನಾಯಕ ಮತ್ತು ನಮ್ಮ ಪಕ್ಷ ಪ್ರಧಾನ ಪ್ರತಿಪಕ್ಷ. ನಮಗೆ ಮಾತನಾಡಲು ಅವಕಾಶವಿಲ್ಲ’’ ಎಂದು ರಾಹುಲ್ ಗಾಂಧಿ ದೂರಿದ್ದಾರೆ.

ರಾಹುಲ್ ಗಾಂಧಿ ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಸ್ಪೀಕರ್ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ನಾನು ಏನೂ ಮಾಡಿಲ್ಲ. ಕಳೆದ 7 ಅಥವಾ 8 ದಿನಗಳಲ್ಲಿ ನನಗೆ ಮಾತನಾಡಲು ಅವಕಾಶವನ್ನೇ ಕೊಡಲಾಗಿಲ್ಲ. ಇದೊಂದು ಹೊಸ ವಿಧಾನ’’ ಎಂದರು.

►ಸದನದಲ್ಲಿ ಘನತೆ ಕಾಪಾಡಿಕೊಳ್ಳಬೇಕು: ಸ್ಪೀಕರ್ ಓಮ್ ಬಿರ್ಲಾ

ಈ ನಡುವೆ, ಸದನದಲ್ಲಿ ಘನತೆಯನ್ನು ಕಾಪಾಡಿಕೊಳ್ಳುವ ಮತ್ತು ನಿಯಮಗಳನ್ನು ಅನುಸರಿಸುವ ಮಹತ್ವದ ಬಗ್ಗೆ ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ಬುಧವಾರ ಮಾತನಾಡಿದ್ದಾರೆ.

‘‘ಸಂಸದರ ವರ್ತನೆಯು ಈ ಸದನ ಅಪೇಕ್ಷಿಸುವ ಅತ್ಯುನ್ನತ ಮಾನದಂಡಗಳಿಗೆ ಹೊಂದಿಕೊಳ್ಳದಿರುವ ಹಲವು ಉದಾಹರಣೆಗಳು ನನ್ನ ಗಮನಕ್ಕೆ ಬಂದಿವೆ’’ ಎಂದು ಸ್ಪೀಕರ್ ಹೇಳಿದ್ದಾರೆ.

ಅವರು ನಿಯಮ 349ನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದರು. ಇದು ಸದನದಲ್ಲಿ ಸದಸ್ಯರು ಅನುಸರಿಸಬೇಕಾದ ನಿಯಮಗಳಿಗೆ ಸಂಬಂಧಿಸಿದ್ದಾಗಿದೆ.

‘‘ಈ ಸದನದಲ್ಲಿ ತಂದೆ ಮತ್ತು ಮಗಳು, ತಾಯಿ ಮತ್ತು ಮಗಳು, ಗಂಡ ಮತ್ತು ಹೆಂಡತಿ ಸದಸ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರತಿಪಕ್ಷ ನಾಯಕರು ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂಬುದಾಗಿ ನಾನು ನಿರೀಕ್ಷಿಸುತ್ತೇನೆ’’ ಎಂದು ಅವರು ಹೇಳಿದರು.

►ಸ್ಪೀಕರ್‌ ಭೇಟಿಯಾದ ಕಾಂಗ್ರೆಸ್ ಸಂಸದರು

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಂಸದರು ಬುಧವಾರ ಸ್ಪೀಕರ್ ಓಮ್ ಬಿರ್ಲಾರನ್ನು ಭೇಟಿಯಾದರು.

ಸದನದ ಘನತೆಯನ್ನು ಕಾಪಾಡಿಕೊಳ್ಳಲು ಸದಸ್ಯರು ಅನುಸರಿಸಬೇಕಾಗಿರುವ ನಿಯಮಗಳನ್ನು ಅನುಸರಿಸುವಂತೆ ರಾಹುಲ್ ಗಾಂಧಿಗೆ ಸ್ಪೀಕರ್ ಸೂಚಿಸಿದ ಬಳಿಕ, ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೋಯಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯ ಸಚೇತಕ ಮಣಿಕ್ಕಮ್ ಟಾಗೋರ್ ಮತ್ತು ಇತರ 70 ಸಂಸದರು ಸ್ಪೀಕರ್ ಬಿರ್ಲಾರನ್ನು ಭೇಟಿಯಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News