ಮರಾಠಿ ಮಾತನಾಡದ ಡಿ ಮಾರ್ಟ್ ಉದ್ಯೋಗಿಗೆ ಎಂಎನ್‌ಎಸ್ ಕಾರ್ಯಕರ್ತರಿಂದ ಕಪಾಳಮೋಕ್ಷ

PC : PTI
ಮುಂಬೈ: ಮರಾಠಿ ಮಾತನಾಡದೇ ಇರುವುದಕ್ಕಾಗಿ ಮುಂಬೈಯಲ್ಲಿರುವ ಪ್ರಮುಖ ಸೂಪರ್ ಮಾರ್ಕೆಟ್ ಸ್ಟೋರ್ ನ ಉದ್ಯೋಗಿಯೊಬ್ಬರಿಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್)ಯ ಕಾರ್ಯಕರ್ತರು ಕೆನ್ನೆಗೆ ಬಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಧೇರಿ (ಪಶ್ಚಿಮ) ವೆರ್ಸೋವಾದಲ್ಲಿರುವ ಡಿ ಮಾರ್ಟ್ ಸ್ಟೋರ್ ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ಸ್ಟೋರ್ ಉದ್ಯೋಗಿಯೊಬ್ಬರು ಗ್ರಾಹಕರಲ್ಲಿ ‘‘ನಾನು ಮರಾಠಿ ಮಾತನಾಡುವುದಿಲ್ಲ. ನಾನು ಹಿಂದಿ ಮಾತ್ರ ಮಾತನಾಡುತ್ತೇನೆ. ನಿಮೆಗೆ ಏನು ಮಾಡಬೇಕೋ ಅದನ್ನು ಮಾಡಿ’’ ಎಂದು ಹೇಳುತ್ತಿರುವುದು ಕೇಳಿ ಬಂದಿದೆ.
ಉದ್ಯೋಗಿಯ ಹೇಳಿಕೆಯ ವಿಷಯ ಎಂಎನ್‌ಎಸ್ ತಿಳಿದ ಬಳಿಕ ಪಕ್ಷದ ವರ್ಸೋವಾ ಘಟಕದ ಅಧ್ಯಕ್ಷ ಸಂದೇಶ್ ದೇಸಾಯಿ ನೇತೃತ್ವದ ಕಾರ್ಯಕರ್ತರ ಗುಂಪು ಸ್ಟೋರ್‌ಗೆ ತೆರಳಿತು ಹಾಗೂ ಉದ್ಯೋಗಿಯ ಕೆನ್ನೆಗೆ ಬಾರಿಸಿತು.
ಎನ್‌ಎನ್‌ಎಸ್ ಕಾರ್ಯಕರ್ತರು ಡಿ ಮಾರ್ಟ್ ಸ್ಟೋರ್ ನ ಉದ್ಯೋಗಿಯ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯದ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನಂತರ ಸ್ಟೋರ್ ನ ಉದ್ಯೋಗಿ ತನ್ನ ನಡತೆಗೆ ಕ್ಷಮೆ ಕೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.