ಕ್ಯಾಂಪಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ‘ಸ್ವಯಂ ಗಡಿಪಾರು’ಗೊಳ್ಳುವಂತೆ ಅಮೆರಿಕದಲ್ಲಿಯ ನೂರಾರು ವಿದೇಶಿ ವಿದ್ಯಾರ್ಥಿಗಳಿಗೆ ಆದೇಶ

Update: 2025-03-29 16:24 IST
ಕ್ಯಾಂಪಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ‘ಸ್ವಯಂ ಗಡಿಪಾರು’ಗೊಳ್ಳುವಂತೆ ಅಮೆರಿಕದಲ್ಲಿಯ ನೂರಾರು ವಿದೇಶಿ ವಿದ್ಯಾರ್ಥಿಗಳಿಗೆ ಆದೇಶ

ಸಾಂದರ್ಭಿಕ ಚಿತ್ರ (PTI)

  • whatsapp icon

ಹೊಸದಿಲ್ಲಿ,ಮಾ.೨೯: ಅಮೆರಿಕದ ವಿದೇಶಾಂಗ ಇಲಾಖೆಯು ಕ್ಯಾಂಪಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಸ್ವಯಂ ಗಡಿಪಾರುಗೊಳ್ಳುವಂತೆ ಆದೇಶಿಸಿ ನೂರಾರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇಮೇಲ್‌ಗಳನ್ನು ರವಾನಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಅಮೆರಿಕದ ವಿವಿಗಳ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕೆ ಮಾತ್ರವಲ್ಲ,ಸಂಬಂಧಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಶೇರ್ ಅಥವಾ ಲೈಕ್ ಮಾಡಿದ್ದಕ್ಕಾಗಿಯೂ ದೇಶವನ್ನು ತೊರೆಯುವಂತೆ ಅವರಿಗೆ ಆದೇಶಿಸಲಾಗಿದೆ ಎಂದು ವರದಿಯು ತಿಳಿಸಿದೆ.

ಇಮೇಲ್‌ಗಳನ್ನು ಸ್ವೀಕರಿಸಿದವರಲ್ಲಿ ಭಾರತೀಯ ವಿದ್ಯಾರ್ಥಿಗಳೂ ಇರಬಹುದು,ವಲಸೆ ವಕೀಲರು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ ಎಂದೂ ವರದಿಯು ಹೇಳಿದೆ.

ವಿದೇಶಾಂಗ ಇಲಾಖೆಯು ಈ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ.

ವರದಿಯ ಪ್ರಕಾರ ವಿದೇಶಾಂಗ ಇಲಾಖೆಯು ನಡೆಸುತ್ತಿರುವ ಸಾಮಾಜಿಕ ಮಾಧ್ಯಮಗಳ ಪರಿಶೀಲನೆಯ ಆಧಾರದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಹೊಸ ವಿದ್ಯಾರ್ಥಿ ವೀಸಾ ಅರ್ಜಿಗಳೂ ಈ ಪರಿಶೀಲನೆಗೊಳಪಟ್ಟಿದ್ದು,ಅದರ ಆಧಾರದಲ್ಲಿ ಅರ್ಜಿದಾರರಿಗೆ ಅಮೆರಿಕದಲ್ಲಿ ವ್ಯಾಸಂಗ ಮಾಡಲು ಅನುಮತಿಯನ್ನು ನಿರಾಕರಿಸಲಾಗುತ್ತಿದೆ.

ಸುದ್ದಿಸಂಸ್ಥೆಯು ಉಲ್ಲೇಖಿಸಿರುವ ವಿದೇಶಾಂಗ ಇಲಾಖೆಯ ಇಮೇಲ್‌ನಲ್ಲಿ ಈ ಕ್ರಮವನ್ನು ಏಕೆ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವಿವರಗಳನ್ನು ಒದಗಿಸಲಾಗಿಲ್ಲ.

ನಿಮ್ಮ ವೀಸಾವನ್ನು ವಿತರಿಸಿದ ಬಳಿಕ ಹೆಚ್ಚುವರಿ ಮಾಹಿತಿ ಲಭ್ಯವಾಗಿದೆ, ಹೀಗಾಗಿ ಅಧ್ಯಯನ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ ಎಂದಷ್ಟೇ ವಿದ್ಯಾರ್ಥಿಗಳಿಗೆ ಕಳುಹಿಸಿರುವ ಇಮೇಲ್‌ಗಳಲ್ಲಿ ತಿಳಿಸಲಾಗಿದೆ.

ಕಾನೂನುಬದ್ಧ ವಲಸೆ ಸ್ಥಾನಮಾನವಿಲ್ಲದೆ ಅಮೆರಿಕದಲ್ಲಿ ಉಳಿಯುವುದು ದಂಡ,ಬಂಧನ ಮತ್ತು/ಅಥವಾ ಗಡಿಪಾರು ಮಾಡಲು ಕಾರಣವಾಗಬಹುದು. ಅದು ನಿಮ್ಮನ್ನು ಭವಿಷ್ಯದಲ್ಲಿ ಅಮೆರಿಕದ ವೀಸಾಕ್ಕೆ ನಿಮ್ಮನ್ನು ಅನರ್ಹಗೊಳಿಸಬಹುದು ಎಂದೂ ಇಮೇಲ್‌ಗಳಲ್ಲಿ ತಿಳಿಸಲಾಗಿದೆ.

ಅಮೆರಿಕದ ಕಾಲೇಜು ಕ್ಯಾಂಪಸ್‌ಗಳಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭಾಗಿಯಾಗಿದ್ದ ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಡೊನಾಲ್ಡ್ ಟ್ರಂಪ ಆಡಳಿತವು ಗದಾಪ್ರಹಾರ ನಡೆಸುತ್ತಿದ್ದು,ಪರಿಣಾಮವಾಗಿ ವೀಸಾಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News