ಎಂಪುರಾನ್ ವಿವಾದ: ಬಲಪಂಥೀಯ ಸಂಘಟನೆಗಳ ಆಕ್ರೋಶದ ನಂತರ 24 ದೃಶ್ಯಗಳಿಗೆ ಕತ್ತರಿ ಹಾಕಿದ ಚಿತ್ರ ತಂಡ

Update: 2025-04-01 20:27 IST
L2: Empuraan poster

Credit: X/@PrithviOfficial

  • whatsapp icon

ತಿರುವನಂತಪುರಂ: ವಿವಾದಿತ ಪಾತ್ರದ ಹೆಸರನ್ನು ಬದಲಿಸುವುದರಿಂದ ಹಿಡಿದು, ಕೃತಜ್ಞತೆಗಳ ಪಟ್ಟಿಯಿಂದ ಕೇಂದ್ರ ಸಚಿವ ಸುರೇಶ್ ಗೋಪಿ ಹೆಸರನ್ನು ಕೈಬಿಡುವವರೆಗೆ ಒಟ್ಟು 24 ದೃಶ್ಯಗಳನ್ನು ಸ್ವಯಂಪ್ರೇರಿತವಾಗಿ ಕೈಬಿಟ್ಟಿರುವ ಮೋಹನ್ ಲಾಲ್ ನಾಯಕತ್ವದ ಬಹು ನಿರೀಕ್ಷಿತ 'ಎಲ್2: ಎಂಪುರಾನ್' ಚಲನಚಿತ್ರ ಮರು ಬಿಡುಗಡೆಗೆ ಸಜ್ಜಾಗಿದೆ.

ಚಿತ್ರದ ವಿರುದ್ಧ ಬಿಜೆಪಿ-ಸಂಘ ಪರಿವಾರದ ಕಾರ್ಯಕರ್ತರು ಬಲವಾದ ಅಭಿಯಾನ ನಡೆಸುತ್ತಿರುವ ಬೆನ್ನಿಗೇ, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದ ನಿರ್ಮಾಪಕ ಆ್ಯಂಟನಿ ಪೆರುಂಬವೂರ್, ಯಾವುದೇ ವರ್ಗದ ಯಾವುದೇ ಬಗೆಯ ಒತ್ತಡಕ್ಕೆ ಒಳಗಾಗದೆ ಕೆಲ ದೃಶ್ಯಗಳನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮರು ಸೆನ್ಸಾರ್ ಪ್ರಮಾಣ ಪತ್ರವನ್ನು ಈಗಾಗಲೇ ಮಂಜೂರು ಮಾಡಿರುವುದರಿಂದ, ಚಿತ್ರದ ಮರು ಸಂಕಲನಗೊಂಡ ಆವೃತ್ತಿಯು ಯಾವುದೇ ಕ್ಷಣದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಚಿತ್ರದ ಖಳನಾಯಕ ಪಾತ್ರದ ಬಾಲರಾಜ್ ಅಲಿಯಾಸ್ ಬಾಬಾ ಬಜರಂಗಿ ಹೆಸರು ಬಜರಂಗ ದಳದ ನಾಯಕ ಬಾಬು ಬಜರಂಗಿ ಹೆಸರನ್ನು ಹೋಲುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿರುವುದರಿಂದ, ಆ ಪಾತ್ರದ ಹೆಸರನ್ನು ಬಲದೇವ್ ಎಂದು ಬದಲಾವಣೆ ಮಾಡಿರುವುದೂ ಸೇರಿದಂತೆ, ಚಿತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಇದರೊಂದಿಗೆ, ಚಿತ್ರದಿಂದ ತೆಗೆದು ಹಾಕಿರುವ ದೃಶ್ಯಗಳಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರದ ಕೆಲವು ದೃಶ್ಯಗಳು, ಪ್ರಾರ್ಥನಾ ಸ್ಥಳಗಳ ದೃಶ್ಯಗಳೂ ಸೇರಿವೆ. ರಾಷ್ಟ್ರೀಯ ತನಿಖಾ ದಳದ ಉಲ್ಲೇಖ ಸೇರಿದಂತೆ ಹಲವು ಸಂಭಾಷಣೆಗಳನ್ನೂ ನಿಶ್ಯಬ್ದಗೊಳಿಸಲಾಗಿದೆ. 2002ನೇ ವರ್ಷ ಎಂಬ ಉಲ್ಲೇಖವನ್ನು 'ಕೆಲವು ವರ್ಷಗಳ ಹಿಂದೆ' ಎಂದು ಬದಲಿಸಲಾಗಿದೆ.

ಕೃತಜ್ಞತಾ ಪಟ್ಟಿಯಲ್ಲಿದ್ದ ಕೇರಳದ ಏಕೈಕ ಬಿಜೆಪಿ ಸಂಸದರಾದ ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಹೆಸರನ್ನು ಅವರ ಮನವಿಯ ಮೇರೆಗೆ ಕೈಬಿಡಲಾಗಿದೆ. ಭಾರತೀಯ ಕಂದಾಯ ಸೇವೆಯ ಅಧಿಕಾರಿಯೊಬ್ಬರಿಗೆ ಸಲ್ಲಿಸಲಾಗಿದ್ದ ಕೃತಜ್ಣತೆಯನ್ನೂ ತೆಗೆದು ಹಾಕಲಾಗಿದೆ.

ಇದಕ್ಕೂ ಮುನ್ನ, ಮಾರ್ಚ್ 27ರಂದು ಬಿಡುಗಡೆಯಾಗಿದ್ದ 'ಎಂಪುರಾನ್' ಚಿತ್ರದಿಂದ ಎರಡು ನಿಮಿಷ ಹಾಗೂ ಎಂಟು ಸೆಕೆಂಡ್‌ಗಳ ಅವಧಿಯನ್ನು ಕಡಿತಗೊಳಿಸಲಾಗಿದೆ. ಸೋಮವಾರದವರೆಗೆ 200 ಕೋಟಿ ರೂ.ಗೂ ಹೆಚ್ಚು ಗಲ್ಲಾಪೆಟ್ಟಿಗೆ ಸಂಗ್ರಹ ಕಂಡಿರುವ ಸ್ವಯಂಪ್ರೇರಿತ ಕಡಿತವಿಲ್ಲದ 'ಎಂಪುರಾನ್' ಚಿತ್ರವನ್ನು ವೀಕ್ಷಿಸಲು ಕಳೆದ ಒಂದೆರಡು ದಿನಗಳಿಂದ ಚಿತ್ರಮಂದಿರಗಳ ಬಳಿ ಪ್ರೇಕ್ಷಕರಿಂದ ಭಾರಿ ನೂಕುನುಗ್ಗಲುಂಟಾಗಿದೆ.

ಈ ನಡುವೆ, ಚಿತ್ರದ ಬಗೆಗಿನ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಆ್ಯಂಟನಿ ಪೆರುಂಬವೂರ್, ಚಿತ್ರಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳೂ ಸಾಮೂಹಿಕವಾಗಿದ್ದು, ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮೇಲೆ ದಾಳಿ ನಡೆಸಲು ಯಾವುದೇ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ಮೋಹನ್ ಲಾಲ್‌ಗೂ ಕೂಡಾ ಚಿತ್ರದ ಕತೆಯ ಬಗ್ಗೆ ಚೆನ್ನಾಗಿ ತಿಳಿದಿತ್ತು. ಸಮಾಜದ ಯಾವುದೇ ವರ್ಗದ ಭಾವನೆಗಳಿಗೆ ಧಕ್ಕೆಯುಂಟು ಮಾಡದಿರಲು ಚಿತ್ರತಂಡವು ಸ್ವಯಂಪ್ರೇರಿತವಾಗಿ ಕೆಲ ದೃಶ್ಯಗಳನ್ನು ಕೈಬಿಟ್ಟಿದೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿರಲಿಲ್ಲ" ಎಂದೂ ಅವರು ಸಮಜಾಯಿಷಿ ನೀಡಿದ್ದಾರೆ.

ಮೋಹನ್ ಲಾಲ್ ಅವರಿಗೆ ಚಿತ್ರದ ಕತೆ ತಿಳಿದಿರಲಿಲ್ಲ ಎಂಬ ಸೇನೆಯ ಮಾಜಿ ಅಧಿಕಾರಿ ಹಾಗೂ ಬಿಜೆಪಿ ನಾಯಕರಾದ ಎ.ಕೆ.ರವೀಂದ್ರನ್ ಅಲಿಯಾಸ್ ಮೇಜರ್ ರವಿ ಅವರ ಆರೋಪವನ್ನೂ ಆ್ಯಂಟನಿ ತಳ್ಳಿ ಹಾಕಿದ್ದಾರೆ. ಈ ವಿಷಯದ ಕುರಿತು ಚಿತ್ರದ ಕತೆಗಾರ ಮುರಳಿ ಗೋಪಿ ಮೌನವಾಗಿರುವುದರ ಅರ್ಥ, ಅವರು ಸ್ವಯಂಪ್ರೇರಿತ ಕಡಿತದ ನಿರ್ಧಾರದಲ್ಲಿ ಭಾಗಿಯಾಗಿರಲಿಲ್ಲವೆಂದಲ್ಲ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News