AI ರಚಿತ ‘ಜಿಬ್ಲಿ’ ಆ್ಯನಿಮೇಷನ್‌ಗಳು ಆಕರ್ಷಕವಾಗಿವೆ, ಆದರೆ ಅವು ಕಲೆಯನ್ನು ಬಿಂಬಿಸುತ್ತಿವೆಯೇ?

Update: 2025-04-01 20:18 IST
AI ರಚಿತ ‘ಜಿಬ್ಲಿ’ ಆ್ಯನಿಮೇಷನ್‌ಗಳು ಆಕರ್ಷಕವಾಗಿವೆ, ಆದರೆ ಅವು ಕಲೆಯನ್ನು ಬಿಂಬಿಸುತ್ತಿವೆಯೇ?

Image: X/@MDurbar

  • whatsapp icon

ಹೊಸದಿಲ್ಲಿ : ಓಪನ್ AI (ಮುಕ್ತ ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಇನ್ನಷ್ಟು ಮುಂದುವರಿಯುವದರೊಂದಿಗೆ ಸಾಮಾಜಿಕ ಮಾಧ್ಯಮಗಳು ಜಪಾನಿನ ಖ್ಯಾತ ಆ್ಯನಿಮೇಟರ್ ಹಾಗೂ ಸ್ಟುಡಿಯೊ ಜಿಬ್ಲಿಯ ಸಹಸ್ಥಾಪಕ ಹಯಾವೊ ಮಿಯಾಝಾಕಿ ಶೈಲಿಯಲ್ಲಿ AI-ರಚಿತ ಚಿತ್ರಗಳಿಂದ ತುಂಬಿಹೋಗಿವೆ. ಬಾಲಿವುಡ್ ಬ್ಲಾಕ್ ಬಸ್ಟರ್ಗಳು,ಇಂಟರ್ನೆಟ್ ಮೀಮ್ಗಳು,ಅಷ್ಟೇ ಏಕೆ...ನಿಜ ಜೀವನದ ಛಾಯಾಚಿತ್ರಗಳೂ ಸೌಮ್ಯ ಜಲವರ್ಣಗಳು ಮತ್ತು ಜಿಬ್ಲಿ ಚಲನಚಿತ್ರದ ಕೈಯಿಂದ ರಚಿಸಿದ ಮೋಡಿಯೊಂದಿಗೆ ಇದ್ದಕ್ಕಿದ್ದಂತೆ ಮರುರೂಪಿಸಲ್ಪಟ್ಟಿವೆ. ಇದು ಅಚ್ಚರಿದಾಯಕವಾಗಿದೆ, ಜೊತೆಗೆ ಪ್ರಭಾವಿಯೂ ಆಗಿದೆ.

ಆದರೆ ಇದು ನಿಜವಾದ ಕಲೆಯೇ?

ಈ ಬಗ್ಗೆ ಸ್ವತಃ ಮಿಯಾಝಾಕಿ ಏನು ಯೋಚಿಸುತ್ತಾರೆ ಎಂದು ಊಹಿಸುವುದು ಕಷ್ಟವೇನಲ್ಲ. ಆ್ಯನಿಮೇಷನ್ ಜಗತ್ತಿನಲ್ಲಿ ಅತ್ಯಂತ ಗೌರವವನ್ನು ಹೊಂದಿರುವ ಮಿಯಾಝಾಕಿ AI-ರಚಿತ ಕಾರ್ಯಗಳ ಬಗ್ಗೆ ತನ್ನ ತಿರಸ್ಕಾರವನ್ನು ಎಂದಿಗೂ ಮುಚ್ಚಿಡಲಿಲ್ಲ. AI-ರಚಿತ ಆ್ಯನಿಮೇಷನ್ ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದ, ಈಗ ಪ್ರಸಿದ್ಧವಾಗಿರುವ 2016ರ ಕ್ಲಿಪ್ ನಲ್ಲಿ ‘ಇದು ಜೀವನಕ್ಕೇ ಅವಮಾನ’ ಎಂದು ಅವರು ಬಣ್ಣಿಸಿದ್ದರು. ಇದು ಓಬಿರಾಯನ ಶೈಲಿಗೇ ಜೋತು ಬಿದ್ದಿರುವ ಹಳೆಯ ತಲೆಯ ಗೊಣಗಾಟ ಎಂದು ಕೆಲವರು ತಳ್ಳಿ ಹಾಕಿದ್ದರು.

ಆದರೆ ಮಿಯಾಝಾಕಿಯವರ ಮಾತುಗಳು ಈಗ ಹಿಂದೆಂದಿಗಿಂತಲೂ ಪ್ರಸ್ತುತವಾಗಿವೆ. ಏಕೆಂದರೆ AI ಜಿಬ್ಲಿಯ ಸೌಂದರ್ಯವನ್ನು ಪುನರಾವರ್ತಿಸಬಹುದು. ಆದರೆ ಅದರ ಜೀವಾಳವನ್ನು ಸೆರೆಹಿಡಿಯಲು ಅದಕ್ಕೆಂದಿಗೂ ಸಾಧ್ಯವಿಲ್ಲ.

ಕಲೆ ಅಂದ್ರೆ ಕೇವಲ ಅಂತಿಮ ಚಿತ್ರ, ದಕ್ಷತೆ ಅಥವಾ ಸ್ವಯಂಚಾಲಿತ ತಂತ್ರ ಅಲ್ಲ. ಅದು ಚಿತ್ರಗಳನ್ನು ರೂಪಿಸುವ ಕೈಗಳು,ಅದರಲ್ಲಿ ಹೆಣೆದ ಕಥೆಗಳು ಮತ್ತು ಆ ಕಾರ್ಯದ ಹಿಂದಿನ ಸಮರ್ಪಿತ ವರ್ಷಗಳ ಕುರಿತಾಗಿದೆ. ಅದು ಅಪೂರ್ಣ,ಬದಲಿಸಲಾಗದ ಮತ್ತು ಆಳವಾದ ವೈಯಕ್ತಿಕತೆಯ ಕುರಿತಾಗಿದೆ. ಜಿಬ್ಲಿ ಚಿತ್ರಗಳು ಅಪೂರ್ಣತೆಗಳು, ಪ್ರತಿಯೊಂದೂ ಫ್ರೇಮ್ ಗೂ ಜೀವ ತುಂಬುವ ಮಾನವ ಸ್ಪರ್ಶದ ಮೇಲೆ ನಿರ್ಮಾಣಗೊಂಡಿವೆ. ಅನಿಮೇಟರ್ ಗಳು ತಮ್ಮ ಕಲೆಯನ್ನು ಪರಿಷ್ಕರಿಸಲು ವರ್ಷಗಳನ್ನು ಕಳೆಯುತ್ತಾರೆ. ಕೇವಲ ಅವು ಚೆನ್ನಾಗಿ ಕಾಣುವಂತೆ ಮಾಡುವುದಕ್ಕಲ್ಲ. ಅವು ನಿಜ ಎಂಬ ಭಾವನೆಯು ಮೂಡುವಂತಾಗಲೂ ಅವರು ಶ್ರಮಿಸುತ್ತಾರೆ. ಪಾತ್ರವನ್ನು ಜೀವಂತವಾಗಿ ರೂಪಿಸುವಲ್ಲಿ ಅವರ ಕೈಚಳಕ ಅಡಗಿರುತ್ತದೆ. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜನಿಸಿದ್ದ ಮಿಯಾಝಾಕಿ ತನ್ನ ಕಲ್ಪನೆಯ ಬಾಲ್ಯವನ್ನು ಕಲೆಯಲ್ಲಿ ಮೂಡಿಸಿದ್ದರು. ಪ್ರತಿಯೊಂದೂ ಫ್ರೇಮ್ ನಲ್ಲಿ ತನ್ನ ನೆನಪುಗಳು, ಹಂಬಲಗಳು ಮತ್ತು ಮಾನವ ಅನುಭವವನ್ನು ತುಂಬಿದ್ದರು.

AI-ರಚಿತ ಜಿಬ್ಲಿ ಚಿತ್ರವನ್ನು ಚಕಾರವೆತ್ತದೆ ನಾವು ಸಂಭ್ರಮಿಸುವಾಗ ನಾವು ಕೇವಲ ತಂತ್ರಜ್ಞಾನವನ್ನು ಮೆಚ್ಚಿಕೊಳ್ಳುತ್ತಿಲ್ಲ. ನಿಜವಾದ ಕಲಾವಿದರು ತಮ್ಮ ಕೆಲಸಕ್ಕಾಗಿ ಪಡುವ ಶ್ರಮ ಮತ್ತು ಅದರಲ್ಲಿ ತುಂಬುವ ಭಾವನೆಗಳನ್ನು ನಾವು ಕಡೆಗಣಿಸುತ್ತಿದ್ದೇವೆ. ಮಿಯಾಝಾಕಿಯವರ ಚಿತ್ರಗಳು ಕೇವಲ ಕಣ್ಣಿಗೆ ಅದ್ಭುತವಾಗಿ ಗೋಚರಿಸುವುದು ಮಾತ್ರವಲ್ಲ. ಅವು ಅಲ್ಗಾರಿದಮ್ ಎಂದಿಗೂ ಅರ್ಥ ಮಾಡಿಕೊಳ್ಳದ ಸ್ಪರ್ಶವನ್ನು ಒಳಗೊಂಡಿವೆ. AI ಶೈಲಿಗಳನ್ನು ಪುನರಾವರ್ತಿಸಬಹುದು, ಆದರೆ ಅದು ನಿಜವಾದ ಕಲೆಯನ್ನು ವ್ಯಾಖ್ಯಾನಿಸುವ ಉದ್ದೇಶ, ಶ್ರಮ ಮತ್ತು ಜೀವಾಳವನ್ನು ಪುನರಾವರ್ತಿಸಲು ಸಾಧ್ಯವಿಲ್ಲ.

AI ಅಸ್ತಿತ್ವದಲ್ಲಿದೆ ಎನ್ನುವುದು ಅಪಾಯವಲ್ಲ, ಅದರ ಅನುಕರಣೆಗಳನ್ನು ನಾವು ಸಮಾನವಾಗಿ ಸ್ವೀಕರಿಸಲು ಸಿದ್ಧರಿದ್ದೇವೆ ಎನ್ನುವುದರಲ್ಲಿ ಅಪಾಯ ಅಡಗಿದೆ.

ತಂತ್ರಜ್ಞಾನವು ಯಾವಾಗಲೂ ಸೃಜನಶೀಲತೆಯನ್ನು ರೂಪಿಸಿದೆ. ಹೀಗಾಗಿ ಕಲೆಯ ವಿಕಸನದಲ್ಲಿ ಮುಂದಿನ ಹೆಜ್ಜೆಯಾಗಿದೆ ಎಂದು AI ಸಮರ್ಥಕರು ವಾದಿಸುತ್ತಾರೆ. ಆದರೆ ಒಂದು ನಿರ್ಣಾಯಕ ವ್ಯತ್ಯಾಸವಿದೆ. ಪ್ರಿಂಟಿಂಗ್ ಪ್ರೆಸ್,ಕ್ಯಾಮೆರಾ,ಡಿಜಿಟಲ್ ಆ್ಯನಿಮೇಷನ್ ಉಪಕರಣಗಳು ಇವೆಲ್ಲ ಕಲಾವಿದರನ್ನು ಸಶಕ್ತಗೊಳಿಸಿದ್ದವು. ಇನ್ನೊಂದೆಡೆ AI ಇವುಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುತ್ತದೆ. ಅದು ನೆರವಾಗುವುದಿಲ್ಲ, ಅದು ಬದಲಿಸುತ್ತದೆ. ಅದು ಸೃಜನಶೀಲತೆಯನ್ನು ಹೆಚ್ಚಿಸುವುದಿಲ್ಲ, ಅದು ಕಲೆಯನ್ನು ಸ್ವಯಂಚಾಲಿತಗೊಳಿಸುತ್ತದೆ.

ಅಲ್ಲದೆ ನೈತಿಕ ಸಂದಿಗ್ಧತೆಯೂ ಇದೆ. AI-ರಚಿತ ಚಿತ್ರಗಳು ಸುಮ್ಮನೆ ಗಾಳಿಯಿಂದ ಮೂಡಿ ಬರುವುದಿಲ್ಲ, ಅವು ಅಸಂಖ್ಯಾತ ಕಲಾವಿದರ, ಹೆಚ್ಚಾಗಿ ಅವರಿಗೆ ಗೊತ್ತಿಲ್ಲದೆ ಅಥವಾ ಅವರ ಒಪ್ಪಿಗೆಯಿಲ್ಲದೆ, ಕೆಲಸದ ಮೇಲೆ ನಿರ್ಮಾಣಗೊಂಡಿರುತ್ತದೆ. ಓಪನ್ AIನ ಇತ್ತೀಚಿನ ರೋಲ್ ಔಟ್ ಎಷ್ಟೊಂದು ವಿವಾದಾತ್ಮಕವಾಗಿತ್ತೆಂದರೆ ಕಾಪಿರೈಟ್ ಕಳವಳಗಳಿಂದಾಗಿ ಕೆಲವು ಶೈಲಿಗಳನ್ನು ಕೆಲವೇ ಗಂಟೆಗಳಲ್ಲಿ ನಿರ್ಬಂಧಿಸಬೇಕಾಗಿತ್ತು. ಇದೊಂದೇ ಎಲ್ಲವನ್ನೂ ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News