ರಾಜಸ್ಥಾನ |ನೈಟ್ರೋಜನ್ ಅನಿಲ ಸೋರಿಕೆ: ಕಾರ್ಖಾನೆಯ ಮಾಲಕ ಮೃತ್ಯು; 40 ಮಂದಿ ಆಸ್ಪತ್ರೆಗೆ ದಾಖಲು

Photo Credit | NDTV
ಜೈಪುರ: ಆ್ಯಸಿಡ್ ಕಾರ್ಖಾನೆಯೊಂದರ ಗೋದಾಮಿನ ಒಳಗೆ ನಿಲ್ಲಿಸಿದ್ದ ಟ್ಯಾಂಕರ್ ಒಂದರಿಂದ ನೈಟ್ರೋಜನ್ ಅನಿಲ ಸೋರಿಕೆಯಾದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ರಾಜಸ್ಥಾನದ ಬೇವರ್ ನಲ್ಲಿ ನಡೆದಿದೆ.
ಈ ಘಟನೆ ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಬೇವರ್ ಪೊಲೀಸ್ ಠಾಣೆ ವ್ಯಾಪ್ತಿಯ ಬದಿಯಾ ಪ್ರದೇಶದಲ್ಲಿರುವ ಸುನೀಲ್ ಟ್ರೇಡಿಂಗ್ ಕಂಪನಿಯ ಬಳಿ ನಡೆದಿದ್ದು, ಇದರಿಂದಾಗಿ ಹಲವು ಸಾಕು ಹಾಗೂ ಬಿಡಾಡಿ ಪ್ರಾಣಿಗಳೂ ಮೃತಪಟ್ಟಿವೆ.
ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಾರ್ಖಾನೆಯ ಮಾಲಕ ಸುನೀಲ್ ಸಿಂಘಾಲ್ ಎಂದು ಗುರುತಿಸಲಾಗಿದ್ದು, ಅವರು ಇಡೀ ರಾತ್ರಿ ಅನಿಲ ಸೋರಿಕೆಯನ್ನು ನಿಲ್ಲಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ಕೊನೆಗೆ ಅದರ ಪ್ರತಿಕೂಲ ಪರಿಣಾಮಕ್ಕೆ ಬಲಿಯಾಗಿದ್ದಾರೆ. ಈ ವೇಳೆ ಅವರ ದೇಹಾರೋಗ್ಯ ಕ್ಷೀಣಿಸಿದ್ದು, ತಕ್ಷಣವೇ ಅವರನ್ನು ಅಜ್ಮೇರ್ ನಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಟ್ಯಾಂಕರ್ ನಿಂದ ನೈಟ್ರೋಜನ್ ಅನಿಲ ಸೋರಿಕೆಯಾಗಿದೆ. ಈ ಸೋರಿಕೆ ಎಷ್ಟು ಗಂಭೀರವಾಗಿತ್ತೆಂದರೆ, ಕೆಲವೇ ಕ್ಷಣಗಳಲ್ಲಿ ಸಮೀಪದ ವಸತಿ ಪ್ರದೇಶಗಳಿಗೂ ಹರಡಿದ್ದು, ಮನೆಗಳೊಳಗಿದ್ದ ಜನರಿಗೂ ಇದರಿಂದ ದುಷ್ಪರಿಣಾಮ ಉಂಟಾಗಿದೆ. ಈ ಸೋರಿಕೆಯಿಂದಾಗಿ ಹಲವು ನಿವಾಸಿಗಳಿಗೆ ಉಸಿರುಗಟ್ಟುವಿಕೆ ಹಾಗೂ ಕಣ್ಣುರಿಯ ಅನುಭವವಾಗಿದ್ದು, ಇದರಿಂದಾಗಿ ಬೇವರ್ ನಲ್ಲಿರುವ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು 60ಕ್ಕೂ ಹೆಚ್ಚು ಮಂದಿ ನಿವಾಸಿಗಳು ದಾಖಲಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೆ, ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಪೊಲೀಸರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಗ್ನಿಶಾಮಕ ದಳದ ತಂಡಗಳು ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ, ಅನಿಲ ಸೋರಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.
ಮತ್ತಷ್ಟು ಸಾವು-ನೋವುಗಳನ್ನು ತಪ್ಪಿಸಲು ಜಿಲ್ಲಾಡಳಿತದ ಅಧಿಕಾರಿಗಳು ಸುತ್ತಮುತ್ತಲಿನ ನಿವಾಸಿಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಥಳಾಂತರಗೊಳಿಸಿದ್ದಾರೆ. ಜಿಲ್ಲಾಡಳಿತವು ಪರಿಸ್ಥಿತಿಯ ಮೇಲೆ ನಿಗಾ ವಹಿಸುವುದನ್ನು ಮುಂದುವರಿಸಿದೆ. ಅನಿಲ ಸೋರಿಕೆಯ ಪರಿಣಾಮ ತಗ್ಗಿದ್ದರೂ, ಸ್ಥಳೀಯ ನಿವಾಸಿಗಳಲ್ಲಿ ಒಂದು ಬಗೆಯ ಭೀತಿ ಈಗಲೂ ಮನೆ ಮಾಡಿದೆ.
ಅನಿಲ ಸೋರಿಕೆಯಾದ ಕಾರ್ಖಾನೆಗೆ ಬೀಗ ಮುದ್ರೆ ಹಾಕುವಂತೆ ಆದೇಶಿಸಿರುವ ಜಿಲ್ಲಾಧಿಕಾರಿ ಡಾ. ಮಹೇಂದ್ರ ಖದ್ಗಾವತ್, ತಕ್ಷಣವೇ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಅನಿಲ ಸೋರಿಕೆಯ ಕಾರಣಗಳ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತೆಗೆದುಕೊಳ್ಳಬೇಕಾದ ಮತ್ತಷ್ಟು ಸುರಕ್ಷತಾ ಕ್ರಮಗಳ ಕುರಿತು ಮೌಲ್ಯಮಾಪನ ನಡೆಸುತ್ತಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ವಾರ್ಡ್ ಕೌನ್ಸಿಲರ್ ಹನ್ಸ್ ರಾಜ್ ಶರ್ಮ, “ಸ್ಥಳೀಯ ನಿವಾಸಿಗಳು ಆ್ಯಸಿಡ್ ಕಾರ್ಖಾನೆಯೊಂದರಲ್ಲಿ ಸೋರಿಕೆಯಾಗಿರುವ ಬಗ್ಗೆ ನನಗೆ ಮಾಹಿತಿ ನೀಡಿದರು. ತಕ್ಷಣವೇ ನಾನು ಅಗ್ನಿ ಶಾಮಕ ದಳ ಹಾಗೂ ಜಿಲ್ಲಾಡಳಿತಕ್ಕೆ ಈ ಕುರಿತು ಮಾಹಿತಿ ನೀಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಅನಿಲ ಸೋರಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಸ್ಥಳದಲ್ಲಿ ಹಾಜರಿದ್ದ ವಿಶೇಷ ಜಿಲ್ಲಾಧಿಕಾರಿ ದಿವ್ಯಾಂಶ್ ಸಿಂಗ್, ಸೋರಿಕೆಯಾದ ಅನಿಲ ನೈಟ್ರೋಜನ್ ಎಂದು ದೃಢಪಡಿಸಿದ್ದಾರೆ”, ಎಂದು ಹೇಳಿದ್ದಾರೆ.
ಈ ನಡುವೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಥಳೀಯ ನಿವಾಸಿಗಳಿಗೆ ಜಿಲ್ಲಾಡಳಿತ ಭರವಸೆ ನೀಡಿದೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ತಡೆಯಲು ಅಧಿಕಾರಿಗಳು ಆ್ಯಸಿಡ್ ಕಾರ್ಖಾನೆಯ ಸುರಕ್ಷತಾ ತಪಾಸಣೆಗೂ ಆದೇಶಿಸಿದ್ದಾರೆ.
ಈ ಅನಿಲ ಸೋರಿಕೆಯಿಂದಾಗಿ, ಕಾರ್ಖಾನೆಯ ಸುತ್ತಮುತ್ತ ವಾಸಿಸುತ್ತಿರುವ ನಿವಾಸಿಗಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಆಡಳಿತ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅನಿಲದ ದುಷ್ಪರಿಣಾಮವನ್ನು ತಡೆಯಲು ಮೊದಲು ಟ್ಯಾಂಕರ್ ಮೇಲೆ ನೀರು ಸುರಿದು, ಅದರ ಮುಚ್ಚಳವನ್ನು ಮುಚ್ಚಿದ್ದಾರೆ. ಇದಾದ ನಂತರವಷ್ಟೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಈ ಘಟನೆಯಿಂದಾಗಿ ಇಡೀ ಪ್ರದೇಶದಲ್ಲಿ ಗಾಬರಿ ಆವರಿಸಿದ್ದು, ಮುಂದಿನ ಅವಘಡಗಳನ್ನು ತಡೆಯಲು ಜಾಗೃತರಾಗಿರಬೇಕು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸ್ಥಳೀಯ ನಿವಾಸಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡಿರುವವರಿಗೆ ಚಿಕಿತ್ಸೆ ಮುಂದುವರಿದಿದ್ದು, ಇದೇ ವೇಳೆ, ಅನಿಲ ಸೋರಿಕೆ ಅಪಘಾತದ ಕುರಿತು ಜಿಲ್ಲಾಡಳಿತ ತಂಡ ತನಿಖೆಯನ್ನು ಪ್ರಾರಂಭಿಸಿದೆ.