2024-25ರಲ್ಲಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಸಮಗ್ರ ಶಿಕ್ಷಾ ಯೋಜನೆಯ ಹಣ ಬಿಡುಗಡೆಯಾಗಿಲ್ಲ: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು 2024-25ನೇ ಸಾಲಿಗೆ ಸಮಗ್ರ ಶಿಕ್ಷಾ ಯೋಜನೆಯಡಿ ಕೇಂದ್ರದಿಂದ ಯಾವುದೇ ಹಣವನ್ನು ಸ್ವೀಕರಿಸಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯಸಭೆಯಲ್ಲಿ ತಿಳಿಸಿದೆ.
2018ರಲ್ಲಿ ಜಾರಿಗೊಂಡ ಸಮಗ್ರ ಶಿಕ್ಷಾ ಯೋಜನೆಯ ಮೂಲಕ ಕೇಂದ್ರ ಸರಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣಕ್ಕೆ ಬೆಂಬಲವನ್ನು ಒದಗಿಸುತ್ತದೆ.
ಸಹಾಯಕ ಶಿಕ್ಷಣ ಸಚಿವ ಜಯಂತ ಚೌಧರಿಯವರು ಬುಧವಾರ ರಾಜ್ಯಸಭೆಯಲ್ಲಿ ಹಂಚಿಕೊಂಡ ದತ್ತಾಂಶಗಳ ಪ್ರಕಾರ ಕೇಂದ್ರದಿಂದ ಯೋಜನೆಯಡಿ ಪ್ರಸಕ್ತ ವಿತ್ತವರ್ಷಕ್ಕಾಗಿ ಕೇರಳಕ್ಕೆ 328.90 ಕೋಟಿ ರೂ., ತಮಿಳುನಾಡಿಗೆ 2,151.60 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳಕ್ಕೆ 1,745.80 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತಾದರೂ ಮಾ.27ರವರೆಗೆ ಈ ರಾಜ್ಯಗಳಿಗೆ ಹಣ ಬಿಡುಗಡೆಯಾಗಿರಲಿಲ್ಲ.
ಚೌಧರಿ ಅವರು ಸಮಗ್ರ ಶಿಕ್ಷಾ ಯೋಜನೆಯಡಿ ರಾಜ್ಯಗಳಿಗೆ ಇನ್ನೂ ಬಿಡುಗಡೆಯಾಗದ ಹಣದ ಕುರಿತು ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಯೋಜನೆಯಡಿ ಉತ್ತರ ಪ್ರದೇಶಕ್ಕೆ ಅತ್ಯಂತ ಹೆಚ್ಚು ಹಣವನ್ನು,ಅಂದರೆ 6,971.26 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು,ಈ ಪೈಕಿ 4,487.46 ಕೋಟಿ ರೂ.ಗಳನ್ನು ಅದು ಈಗಾಗಲೇ ಸ್ವೀಕರಿಸಿದೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ.
ಪ್ರಸಕ್ತ ವಿತ್ತವರ್ಷಕ್ಕಾಗಿ ಕೇಂದ್ರವು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 45,830.21 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು,ಮಾ.27ರವರೆಗೆ ಕೇರಳ,ತಮಿಳುನಾಡು ಮತ್ತು ಪ.ಬಂಗಾಳ ಹೊರತುಪಡಿಸಿ ಇತರ ರಾಜ್ಯಗಳಿಗೆ 27,833.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಯೋಜನೆಯಡಿ ಹಣವನ್ನು ಪಠ್ಯಪುಸ್ತಕಗಳು,ಮೂಲಸೌಕರ್ಯ ನವೀಕರಣಗಳು ಮತ್ತು ಶಿಕ್ಷಕರ ವೇತನ ಇತ್ಯಾದಿಗಳಿಗಾಗಿ ಬಳಸಲಾಗುತ್ತದೆ ಮತ್ತು ಇದನ್ನು ಹಲವಾರು ಮಾನದಂಡಗಳ ಆಧಾರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಚೌಧರಿ ತಿಳಿಸಿದರು.
ಸಮಗ್ರ ಶಿಕ್ಷಾ ಯೋಜನೆಯಡಿ ತನಗೆ ಹಂಚಿಕೆಯಾದ ಹಣವನ್ನು ತಾನು ಸ್ವೀಕರಿಸಿಲ್ಲ ಎಂದು ತಮಿಳುನಾಡು ಸರಕಾರವು ಹಲವಾರು ತಿಂಗಳುಗಳಿಂದ ದೂರುತ್ತಿದೆ. ಹಣದ ಕೊರತೆಯಿಂದಾಗಿ ರಾಜ್ಯದಲ್ಲಿಯ ಶಿಕ್ಷಕರು ವೇತನ ವಿಳಂಬಗಳನ್ನು ಎದುರಿಸುತ್ತಿದ್ದಾರೆ.
ಕೇರಳ,ತಮಿಳುನಾಡು ಮತ್ತು ಪ.ಬಂಗಾಳ ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಅಥವಾ ಪಿಎಂ ಶ್ರೀ ಯೋಜನೆಯನ್ನು ಅನುಸರಿಸಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಈ ರಾಜ್ಯಗಳಿಗೆ ಹಣ ಬಿಡುಗಡೆ ಸ್ಥಗಿತಗೊಂಡಿದೆ.
ಕೇಂದ್ರ ಪ್ರಾಯೋಜಿತ ಪಿಎಂ ಶ್ರೀ ಯೋಜನೆಯು ಕೇಂದ್ರ,ರಾಜ್ಯ ಅಥವಾ ಪ್ರಾದೇಶಿಕ ಸಂಸ್ಥೆಗಳು ನಿರ್ವಹಿಸುವ ಶಾಲೆಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಹೊಂದಿದೆ. ಆದರೆ ಯೋಜನೆಯ ಲಾಭಗಳನ್ನು ಪಡೆಯಲು ರಾಜ್ಯ ಸರಕಾರಗಳು ಮೊದಲು 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಕೇಂದ್ರದೊಂದಿಗೆ ಒಡಂಬಡಿಕೆಯೊಂದಕ್ಕೆ ಸಹಿ ಹಾಕಬೇಕಾಗುತ್ತದೆ.