ಅಮೆರಿಕ ಪ್ರತಿ ಸುಂಕ: ಆಭರಣ ಮಾರುಕಟ್ಟೆಯಲ್ಲಿ ಆತಂಕ; ಉದ್ಯೋಗ ನಷ್ಟ ಭೀತಿ

Update: 2025-04-04 08:15 IST
ಅಮೆರಿಕ ಪ್ರತಿ ಸುಂಕ: ಆಭರಣ ಮಾರುಕಟ್ಟೆಯಲ್ಲಿ ಆತಂಕ; ಉದ್ಯೋಗ ನಷ್ಟ ಭೀತಿ

PC: x.com/PiQSuite

  • whatsapp icon

ಮುಂಬೈ: ಭಾರತದಿಂದ ಆಮದಾಗುವ ಚಿನ್ನ ಮತ್ತು ವಜ್ರದ ಆಭರಣಗಳ ಮೇಲಿನ ಆಮದಿನ ಮೇಲೆ ಶೇಕಡ 27ರಷ್ಟು ಸುಂಕ ವಿಧಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದಿಂದ ಭಾರತದ ಆಭರಣ ಮಾರುಕಟ್ಟೆಯಲ್ಲಿ ತೀವ್ರ ಆತಂಕ ಮನೆ ಮಾಡಿದೆ. ವಿಶ್ವದ ಅತಿದೊಡ್ಡ ರಫ್ತು ಮಾರುಕಟ್ಟೆ ಎನಿಸಿದ ಅಮೆರಿಕದಲ್ಲಿ ಭಾರತದ ಆಭರಣಗಳಿಗೆ ಬೇಡಿಕೆ ಕುಸಿಯುವ ಭೀತಿಯಿಂದಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ವಜ್ರ ಕತ್ತರಿಸುವ ಮತ್ತು ಪಾಲಿಶ್ ಮಾಡುವ ಸಾವಿರಾರು ಕಾರ್ಮಿಕರ ಜೀವನಾಧಾರಕ್ಕೆ ಕತ್ತರಿ ಬೀಳುವ ಭೀತಿ ಎದುರಾಗಿದೆ.

2024ನೇ ಹಣಕಾಸು ವರ್ಷದಲ್ಲಿ ಒಟ್ಟು 33 ಶತಕೋಟಿ ಡಾಲರ್ ಮೌಲ್ಯದ ಹರಳು ಮತ್ತು ಆಭರಣಗಳು ಭಾರತದಿಂದ ರಫ್ತಾಗಿದ್ದು, ಈ ಪೈಕಿ ಮೂರನೇ ಒಂದರಷ್ಟು ಅಮೆರಿಕಕ್ಕೆ ರಫ್ತಾಗಿವೆ ಎನ್ನುವುದು ಅಲ್ಲಿನ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ. ಪ್ರಸ್ತುತ ಭಾರತದಿಂದ ಆಮದಾಗುವ ಆಭರಣಗಳ ಮೇಲೆ ಅಮೆರಿಕ ಶೇಕಡ 6ರಷ್ಟು ಸುಂಕ ವಿಧಿಸುತ್ತಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಶೇಕಡ 27ರಷ್ಟು ಸುಂಕ ವಿಧಿಸಿರುವುದರಿಂದ ಈ ದರ ಶೇಕಡ 33ಕ್ಕೆ ಏರಲಿದೆ ಎಂದು ಉದ್ಯಮ ವಿಶ್ಲೇಷಕರು ಅಂದಾಜಿಸಿದ್ದಾರೆ.

ಭಾರತ ಹಾಗೂ ಅಮೆರಿಕದ ವ್ಯಾಪಾರ ಅಧಿಕಾರಿಗಳು ಭಾರತದ ಹರಳು ಮತ್ತು ಆಭರಣ ಉದ್ಯಮಕ್ಕೆ ಅನುಕೂಲಕರವಾಗುವಂತೆ ದ್ವಿಪಕ್ಷೀಯ ಆಮದು- ರಫ್ತು ಸಂಬಂಧವನ್ನು ಏರ್ಪಡಿಸದೇ ಇದ್ದಲ್ಲಿ, ಭಾರತೀಯ ಉತ್ಪನ್ನಗಳಿಗೆ ಅಮೆರಿಕದಲ್ಲಿ ಬೇಡಿಕೆ ಶೇಕಡ 30 ರಿಂದ ಶೇಕಡ 50ರವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಶೇಕಡ 27ರ ಸುಂಕ ವಿಧಿಕೆಯಿಂದಾಗಿ ಭಾರತದಿಂದ ಆಮದಾಗುವ ಆಭರಣಗಳು ಮತ್ತು ಸಂಸ್ಕರಿತ ವಜ್ರದ ಬೆಲೆ ಹೆಚ್ಚಲಿದ್ದು, ಇದು ಅಮೆರಿಕದಲ್ಲಿ ಜನಸಾಮಾನ್ಯರ ಕೈಗೆಟುವುದು ಕಷ್ಟಸಾಧ್ಯ ಎನ್ನಲಾಗಿದೆ.

"ಕಳೆದ ಕೆಲ ವಾರಗಳಿಂದ ಅಮೆರಿಕದಿಂದ ಸುಂಕ ವಿಧಿಕೆಯ ನಿರೀಕ್ಷೆಯಲ್ಲಿದ್ದೆವು. ನಾವು ಶೇಕಡ 10-15ರಷ್ಟು ಹೇರಿಕೆಯಾಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಶೇಕಡ 27 ವಿಧಿಸಿರುವುದು ದೊಡ್ಡ ಹೊರೆಯಾಗಲಿದೆ:" ಎಂದು ಕಾಮಾ ಜ್ಯುವೆಲ್ಲರಿ ಮಾಲೀಕ ಕೊಲಿನ್ ಶಾ ಹೇಳುತ್ತಾರೆ. ಇದು ವೆಚ್ಚ ಹೆಚ್ಚಳಕ್ಕೆ ಕಾರಣವಾಗಲಿದ್ದು, ಅಮೆರಿಕದಲ್ಲಿ ಬೇಡಿಕೆ ಕುಸಿಯಲಿದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News