ಅಂಬೇಡ್ಕರ್ ಹಿಂದೂಗಳನ್ನು ಒಗ್ಗೂಡಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರು: ಮೋಹನ್ ಭಾಗವತ್
Photo Credit: PTI
ಕಾನ್ಪುರ: ʼಹಿಂದೂಗಳನ್ನು ಒಗ್ಗೂಡಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರುʼ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಅಂಬೇಡ್ಕರ್ ಅವರನ್ನು ಶ್ಲಾಘಿಸಿದರು. ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸುತ್ತಿದ್ದರೂ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಬದ್ಧರಾಗಿದ್ದರು ಎಂದು ಹೇಳಿದರು.
ಕಾನ್ಪುರದ ಕರವಾಲೋ ನಗರದಲ್ಲಿ ನೂತನವಾಗಿ ನಿರ್ಮಿಸಿದ ನಾಲ್ಕು ಅಂತಸ್ತಿನ ಆರೆಸ್ಸೆಸ್ ಪ್ರಾದೇಶಿಕ ಕಚೇರಿ ‘ಕೇಶವ ಭವನ’ವನ್ನು ಉದ್ಘಾಟಿಸಿ ಮಾತನಾಡಿದ ಭಾಗವತ್, ಬಾಬಾಸಾಹೇಬರು ತಮ್ಮ ಜೀವನದಲ್ಲಿ ತೀವ್ರ ಕಷ್ಟಗಳನ್ನು ಎದುರಿಸಬೇಕಾಯಿತು. ಬಾಲ್ಯದಿಂದಲೂ ಅವರು ತಾರತಮ್ಯ ಮತ್ತು ಅಸಮಾನತೆಯನ್ನು ಎದುರಿಸಿದ್ದರು. ಆದರೆ, ಅವರು ತಮ್ಮ ಜೀವನದುದ್ದಕ್ಕೂ, ಹಿಂದೂ ಸಮಾಜವನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಸಾಮಾಜಿಕ ಏಕತೆ ಮತ್ತು ಪ್ರಗತಿಗೆ ಅವರ ಬದ್ಧತೆ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಮತ್ತು ಆರೆಸ್ಸೆಸ್ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ರಾಷ್ಟ್ರೀಯ ಅಭಿವೃದ್ಧಿಯ ದೃಷ್ಟಿಕೋನವನ್ನು ಹಂಚಿಕೊಂಡರು. ಇಬ್ಬರೂ ತಮ್ಮ ಜೀವನದುದ್ದಕ್ಕೂ ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದರು. ಅವರು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು ಎಂದು ಭಾಗವತ್ ಹೇಳಿದರು.
ಅಂಬೇಡ್ಕರ್ ಜಯಂತಿಯಂದೇ ಆರೆಸ್ಸೆಸ್‌ನ ನೂತನ ಕಟ್ಟಡ ಉದ್ಘಾಟಿಸುತ್ತಿರುವುದು ನಮ್ಮ ಸೌಭಾಗ್ಯ. ಡಾ.ಅಂಬೇಡ್ಕರ್ ಅವರು ಒಮ್ಮೆ ಮಹಾರಾಷ್ಟ್ರದ ಕರಡ್‌ನಲ್ಲಿ ನಡೆದ ಸಂಘದ ಶಾಖೆಯಲ್ಲಿ ಭಾಗವಹಿಸಿದಾಗ, ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ನಾನು ಇಲ್ಲಿ ಸೇರಿದ್ದೇನೆ ಎಂಬ ಭಾವನೆ ಇದೆ' ಎಂದು ಹೇಳಿದ್ದರು ಎಂದು ಭಾಗವತ್ ಹೇಳಿದರು.