ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ತಂದ ತೆಲಂಗಾಣ ಸರಕಾರ
ತೆಲಂಗಾಣ ಸಿಎಂ ರೇವಂತ್ ರೆಡ್ಡಿ | Photo - PTI
ಹೈದರಾಬಾದ್: ತೆಲಂಗಾಣ ಸರಕಾರ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಕಾಯಿದೆ- 2025 ಅನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಈ ಮೂಲಕ ತೆಲಂಗಾಣ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿದೆ.
ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರ ಎಸ್ಸಿ ಒಳ ಮೀಸಲಾತಿಯನ್ನು ಜಾರಿಗೆ ತಂದಿದೆ. ಮಾದಿಗ ಮತ್ತು ಇತರ ಎಸ್ಸಿ ಉಪಪಂಗಡಗಳ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ. ಇದು ಪರಿಶಿಷ್ಟ (SC) ಜಾತಿಯೊಳಗಿನ ಅಸಮಾನತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ವರದಿಯಾಗಿದೆ.
ಎಸ್ಸಿ ವರ್ಗೀಕರಣವನ್ನು ಅಧ್ಯಯನ ಮಾಡಲು ರಾಜ್ಯವು ಈ ಹಿಂದೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಶಮೀಮ್ ಅಕ್ತರ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಅದರ ಶಿಫಾರಸುಗಳ ಆಧಾರದ ಮೇಲೆ ಅಸ್ತಿತ್ವದಲ್ಲಿರುವ 15 ಪ್ರತಿಶತ SC ಮೀಸಲಾತಿಯನ್ನು ಜನಸಂಖ್ಯೆ ಮತ್ತು ಸಾಮಾಜಿಕ-ಆರ್ಥಿಕ ಸೂಚಕಗಳ ಆಧಾರದ ಮೇಲೆ ಮೂರು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ.
ಗುಂಪು 1: 15 ಜಾತಿಗಳಿಗೆ 1% ಮೀಸಲಾತಿ (SC ಜನಸಂಖ್ಯೆಯ 3.2%)
ಗುಂಪು 2: 18 ಜಾತಿಗಳಿಗೆ 9% ಮೀಸಲಾತಿ (SC ಜನಸಂಖ್ಯೆಯ 62.74%)
ಗುಂಪು 3: 26 ಜಾತಿಗಳಿಗೆ 5% ಮೀಸಲಾತಿ (SC ಜನಸಂಖ್ಯೆಯ 33.96%)
ಕೋಟಾ ಪುನರ್ ರಚನೆಯ ಎಲ್ಲಾ SC ಉಪ-ಜಾತಿಗಳಲ್ಲಿ ವಿಶೇಷವಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ (MRPS) ದೀರ್ಘಕಾಲದ ಬೇಡಿಕೆ ಈಡೇರಿದಂತಾಗುತ್ತದೆ. ಸಮಿತಿಯು ಕಳೆದ ಮೂರು ದಶಕಗಳಿಂದ ಈ ಕುರಿತು ಆಂದೋಲನ ನಡೆಸುತ್ತಿದೆ.
ಸಚಿವ ಉತ್ತಮ್ ಕುಮಾರ್ ರೆಡ್ಡಿ, ಎಸ್ಸಿ ವರ್ಗೀಕರಣದ ಉಪಸಮಿತಿಯ ನೇತೃತ್ವ ವಹಿಸಿದ್ದರು. ಆದೇಶದ ಮೊದಲ ಪ್ರತಿಯನ್ನು ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಹಸ್ತಾಂತರಿಸಿದರು.