ʼಎಂಪುರಾನ್ʼ ಚಿತ್ರದ ನಿರ್ಮಾಪಕರಿಗೆ ಸೇರಿದ ಚಿಟ್ ಫಂಡ್ ಸಂಸ್ಥೆ ಮೇಲೆ ED ದಾಳಿ

ತಮಿಳುನಾಡು : ಎಂಪುರಾನ್ ಚಲನಚಿತ್ರದ ನಿರ್ಮಾಪಕರಿಗೆ ಸೇರಿದ ʼಶ್ರೀ ಗೋಕುಲಂ ಚಿಟ್ಸ್ʼ ಎಂಬ ಚಿಟ್ ಫಂಡ್ ಸಂಸ್ಥೆಯ ಕೇರಳ ಮತ್ತು ತಮಿಳುನಾಡಿನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.
ಮೂಲಗಳ ಪ್ರಕಾರ, ವಿದೇಶಿ ವಿನಿಮಯ ನಿಯಮದ ಉಲ್ಲಂಘನೆ ಕುರಿತು ತನಿಖೆಯ ಭಾಗವಾಗಿ ಚಿಟ್ ಫಂಡ್ ಸಂಸ್ಥೆಯ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಚೆನ್ನೈನಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗೋಕುಲಂ ಗೋಪಾಲನ್ ಅವರಿಗೆ ಸೇರಿದ ಶ್ರೀ ಗೋಕುಲಂ ಚಿಟ್ಸ್ ಫಂಡ್ ಸಂಸ್ಥೆಯ ತಮಿಳುನಾಡು, ಕೇರಳ, ತೆಲಂಗಾಣ, ಪುದುಚೇರಿ, ಮಹಾರಾಷ್ಟ್ರ, ಹೊಸದಿಲ್ಲಿ, ಆಂಧ್ರಪ್ರದೇಶ, ಪಾಂಡಿಚೇರಿ ಮತ್ತು ಹರ್ಯಾಣದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಮೋಹನ್‌ಲಾಲ್ ಅಭಿನಯದ ʼಎಂಪುರಾನ್ʼ ಚಿತ್ರದ ನಿರ್ಮಾಪಕರಲ್ಲಿ ಗೋಪಾಲನ್ ಕೂಡ ಓರ್ವರು. ಎಂಪುರಾನ್ ಚಲನ ಚಿತ್ರ ಮಾರ್ಚ್ 27ರಂದು ಬಿಡುಗಡೆಯಾಯಿತು. ಗುಜರಾತ್ ಗಲಭೆ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಚಿತ್ರವು ವಿವಾದಕ್ಕೆ ಕಾರಣವಾಗಿತ್ತು.